ಉಪ್ಪುಂದ: ಪಡುವರಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಅಳಿವೆಕೋಡಿ – ತಾರಾಪತಿ ಪ್ರದೇಶದ ಸಮುದ್ರ ತೀರದ ಕಲ್ಲಗಳು ಕಡಲಿನ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿವೆ.
ಶನಿವಾರ ರಾತ್ರಿ ಸುರಿದ ಮಳೆ ಹಾಗೂ ಕಡಲಿನ ಅರ್ಭಟಕ್ಕೆ ಅಳಿವೆಕೋಡಿ – ತಾರಾಪತಿಯದೊಂದಿ ಮನೆಯ ಸಮೀಪದ ಸಮುದ್ರ ದಡದಲ್ಲಿ ರಕ್ಷಣೆಗೆ ಹಾಕಲಾಗಿದ್ದ ಕಲ್ಲುಗಳು ಸಮುದ್ರ ಪಾಲಾಗಿದೆ.
ಸುಮಾರು 50ಮೀ.ವರೆಗೆ ತಡೆಗೋಡೆಗೆ ಹಾಕಿರುವ ಕಲ್ಲುಗಳು ಕೊಚ್ಚಿಹೋಗಿದ್ದು, ಮೀನುಗಾರರ ಒಂದು ಶೆಡ್ ಕಡಲಿನ ಪಾಲಾಗಿದೆ.
ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಕಡಲ್ಕೊರೆತ ಹೆಚ್ಚಾಗುತ್ತಿದ್ದು ಹೀಗೆ ಮುಂದುವರಿದರೆ 100ಕ್ಕೂ ಹೆಚ್ಚು ಮೀನುಗಾರರ ಮನೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಗ್ರಾಮ ಪಂಚಾಯಿತ್ ಸದಸ್ಯ ಸುರೇಶ ಬೆಸ್ಕೂರ್
‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕರಾವಳಿಯಲ್ಲಿ ಕಳೆದ ಎರಡು ಮೂರು ನಿರಂತರ ಭಾರೀ ಮಳೆಯಾಗಿರುವುದರಿಂದ ಕಡಲಿನಲ್ಲಿ ಭಾರೀ ಗಾತ್ರದ ಅಲೆಗಳು ಉಂಟಾಗಿರುವುದರಿಂದ ಕಡಲು ಬಿರುಸುಗೊಂಡು ಇನ್ನಷ್ಟು ಕಡಲ ಕೊರೆತ ಸಾಧ್ಯತೆ ಇದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಕಡಲ್ಕೊರೆತ ಸ್ಥಾನಕ್ಕೆ ಯಾವ ಅಧಿಕಾರಿಗಳು ಭೇಟಿ ನೀಡದಿರುವುದಕ್ಕೆ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪಂಚಾಯತ್ ಸದಸ್ಯ ವೀರಭದ್ರ್ ಖಾರ್ವಿ, ಮಾಜಿ ಸದಸ್ಯ ನಾಗೇಶ್ ಖಾರ್ವಿ ಭೇಟಿ ನೀಡಿದ್ದಾರೆ.