Advertisement
ಬಸ್ ಸಂಚಾರ ಸ್ಥಗಿತರಕ್ಕಸಗಾತ್ರ ಅಲೆಯ ಹೊಡೆತಕ್ಕೆ ಸುಮಾರು 50 ಮೀಟರ್ ಉದ್ದಕ್ಕೆ ರಸ್ತೆಯ ಅಡಿಭಾಗ ಕೊರೆದು ಹೋಗಿದ್ದು ಅಲ್ಲಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಸಂಚಾರ ಕಡಿದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದಾಗಿ ಮಂಗಳವಾರ ಬಸ್ ಸಂಚಾರ ಸ್ಥಗಿತಗೊಂಡಿದೆ. ದ್ವಿಚಕ್ರ ವಾಹನ ಬಿಟ್ಟರೆ ಯಾವುದೇ ದೊಡ್ಡ ವಾಹನಗಳು ಸಂಚರಿಸುತ್ತಿಲ್ಲ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಪು, ಕೈಪುಂಜಾಲು ಮಟ್ಟುವಿನಿಂದ ಮಲ್ಪೆ ಕಡೆಗೆ ಬರುವ ಜನರಿಗೆ ತುಂಬ ತೊಂದರೆ ಉಂಟಾಗಿದೆ. ಗಾಳಿಯ ವೇಗ ಇದೇ ರೀತಿ ಮುಂದುವರಿದರೆ ಅಲೆ ಅಬ್ಬರಕ್ಕೆ ರಸ್ತೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಿವರಾಮ ಪುತ್ರನ್ ತಿಳಿಸಿದ್ದಾರೆ.
ಸಮುದ್ರದಲ್ಲಿ ಒಂದೊಂದು ಕಡೆ ಒಂದೊಂದು ಸಲ ಮಾರ್ಯ ಬೀಳುತ್ತದೆ. (ಮಾರ್ಯ = ಸಮುದ್ರ ತಳದಲ್ಲಿ ಮೂರು ಕಡೆಗಳಿಂದ ಏಕಕಾಲದಲ್ಲಿ ತೆರೆಗಳು ಬಂದು ಮರಳು ಎದ್ದು ಹೋಗುವ ಪ್ರಕ್ರಿಯೆ – ಸ್ಥಳೀಯ ಭಾಷೆ). ಮಾರ್ಯ ಬಿದ್ದ ಜಾಗದ ಕೆಲವು ಕಿ.ಮೀ. ಉದ್ದಕ್ಕೆ ಕಡಲಕೊರೆತ ಕಂಡುಬರುತ್ತದೆ. ಸಮುದ್ರದಲ್ಲಿ ಮೂರು ಕಡೆಗಳಿಂದ ಆಳವಾಗಿ ಬರುವ ತೆರೆಗಳು ಒಂದಾಗಿ ಅತೀ ವೇಗದಲ್ಲಿ ಬಂದು ದಡಕ್ಕೆ ಅಪ್ಪಳಿಸಿ ಅಷ್ಟೇ ವೇಗದಲ್ಲಿ ಮರಳನ್ನು ಕೊರೆಯುತ್ತಾ ಸಮುದ್ರ ಸೇರುತ್ತದೆ. ಇದಕ್ಕೆ ಸ್ಥಳೀಯರು ಮಾರ್ಯ ಬೀಳುವುದು ಎನ್ನುತ್ತಾರೆ. ಕೆಲವು ದಿನಗಳವರೆಗೆ ಒಂದೇ ಕಡೆಯಲ್ಲಿರುತ್ತದೆ. ಇದಕ್ಕೆ ಯಾವುದೇ ದೋಣಿ ಸಿಲುಕಿಕೊಂಡರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರಾದ ಪ್ರಭಾಕರ ಸಿ. ಕೋಟ್ಯಾನ್ ಅವರು. ರವಿವಾರದಿಂದ ಕೊರೆತ ಉಂಟಾದ ಜಾಗಕ್ಕೆ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೂ ರಕ್ಕಸ ಗಾತ್ರದ ಅಲೆಗಳಿಂದಾಗಿ ಕಲ್ಲುಗಳು ಒಂದೊಂದಾಗಿ ಜಾರಿ ಸಮುದ್ರ ಸೇರುತ್ತಿವೆ. ವರ್ಷಂಪ್ರತಿ ಕಡಲ ಕೊರೆತಕ್ಕೆ ತಾತ್ಕಾಲಿಕ ಪರಿಹಾರವೆಂದು ಸಮುದ್ರ ಬದಿಗೆ ಬಂಡೆಗಳನ್ನು ಹಾಕಲಾಗುತ್ತದೆ. ಆದರೆ ಅವೈಜ್ಞಾನಿಕವಾಗಿ ಕಲ್ಲುಗಳನ್ನು ಹಾಕಿರುವ ಪರಿಣಾಮ ಆ ಕಲ್ಲುಗಳೆಲ್ಲಾ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.