Advertisement

ಕಾಪು ಬೀಚ್‌ ಮಾಯ! ಉಳ್ಳಾಲದಲ್ಲಿ  ಮತ್ತೆ ಹಾನಿ

03:12 PM Jul 18, 2018 | Team Udayavani |

ಕಾಪು: ಕಾಪು ಬೀಚ್‌ನಲ್ಲಿ ಸಮುದ್ರ ರೌದ್ರಾವತಾರ ತಾಳಿದ್ದು, ಲೈಟ್‌ಹೌಸ್‌ನ ಸುತ್ತಲಿನ ಬಂಡೆ ಕಲ್ಲುಗಳು ಮತ್ತು ದಡದಲ್ಲಿರುವ ವಾಕಿಂಗ್‌ ಟ್ರಾಕ್‌ಗೆ ಬೃಹತ್‌ ಅಲೆಗಳು ಅಪ್ಪಳಿಸುತ್ತಿವೆ.

Advertisement

ಪ್ರಸ್ತುತ ಕಡಲು ಸುಮಾರು 200 ಮೀಟರ್‌ ದಡವನ್ನು ಆಕ್ರಮಿಸಿ ಮುಂದೆ ಬಂದಿದ್ದು, ಮರಳು ಕಾಣಸಿಗುವುದೇ ವಿರಳವಾಗಿದೆ. ಮಳೆ – ಗಾಳಿ ಸಂದರ್ಭ ಲೈಟ್‌ಹೌಸ್‌ನ ಮೇಲೆ ಹೋಗುವುದು ಅಪಾಯಕಾರಿಯಾಗಿದ್ದು, ಜನ ವಾಕಿಂಗ್‌ ಟ್ರಾಕ್‌ನಲ್ಲೇ ನಿಂತು ಸಮುದ್ರ ನೋಡುವಂತಾಗಿದೆ.

ಹೆಚ್ಚುವರಿ ಬಂದೋಬಸ್ತ್ ಅಗತ್ಯ
ಇಲ್ಲಿ ಪ್ರತೀ ಮಳೆಗಾಲದಲ್ಲಿ ಇದೇ ಪರಿಸ್ಥಿತಿ. ಮಳೆ ಗಾಳಿಯ ಸಂದರ್ಭ ಲೈಟ್‌ಹೌಸ್‌ನ ಮೇಲೇರಲು ನಿಷೇಧವಿದ್ದರೂ ಬಂಡೆಯ ಮೇಲೇರಲು ಅನುಮತಿ ಬೇಕಿಲ್ಲ. ಹಾಗಾಗಿ ಪ್ರವಾಸಿಗರು ಬಂಡೆಯನ್ನೇರಿ ಸೆಲ್ಫಿ ತೆಗೆಯುವ ಸಾಧ್ಯತೆ ಹೆಚ್ಚು. ಇದನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್ ಅಗತ್ಯ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮಳೆಗಾಲದಲ್ಲಿ  ಬೀಚ್‌ಗೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಆಗಿರುವ ಅನಾಹುತಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಪ್ರವಾಸಿಗರನ್ನು ಎಚ್ಚರಿಸಲು ಗೃಹರಕ್ಷಕರು, ಟೂರಿಸ್ಟ್‌ ಮಿತ್ರರು, ಲೈಫ್‌ ಗಾರ್ಡ್‌ ಗಳನ್ನು ನೇಮಿಸಲಾಗಿದೆ.
– ಯತೀಶ್‌ ಬೈಕಂಪಾಡಿ, ಸಿಇಒ, ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿ ಉಸ್ತುವಾರಿ

ಉಳ್ಳಾಲ: 3 ದಿನಗಳಲ್ಲಿ  15 ಮನೆಗಳಿಗೆ ಅಪಾಯ
ಉಳ್ಳಾಲ
: ಉಳ್ಳಾಲ ಕೈಕೋ ಮತ್ತು ಕಿಲೇರಿಯಾ ನಗರದಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಕೈಕೋ ಬೀಫಾತುಮ್ಮ ಅವರ ಮನೆಗೆ ಭಾಗಶಃ ಹಾನಿಗೀಡಾಗಿದೆ. ಮೊಗವೀರಪಟ್ಣ ಬಳಿ ಐದಾರು ಮನೆಗಳು ಅಪಾಯದಲ್ಲಿವೆ.

Advertisement

ಮೂರು ದಿನಗಳಿಂದ ಗಾಳಿ ಬೀಸುತ್ತಿದ್ದು, ಉಳ್ಳಾಲ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್‌ ಸೋಮೇಶ್ವರ ಉಚ್ಚಿಲ ಬೀಚ್‌ ರಸ್ತೆ ಮುಂತಾದೆಡೆ ಸಮುದ್ರದ ಅಲೆಗಳು ದಡಕ್ಕಪ್ಪಳಿಸಿ ಹಾನಿಗೀಡಾದ ಮನೆಗಳ ಸಂಖ್ಯೆ 15ಕ್ಕೇರಿದೆ. ಉಚ್ಚಿಲ ಬೀಚ್‌ ಫೆರಿಬೈಲು ಬಳಿ ರಸ್ತೆ ಕುಸಿಯುವ ಭೀತಿ ಇದೆ. ಕೈಕೋ ಕಿಲೇರಿಯಾ ನಗರದಲ್ಲಿ ಸಮುದ್ರ ರೌದ್ರವಾತಾರ ತೋರಿಸಿದ್ದು, ಸೋಮವಾರ ಭಾಗಶಃ ಕುಸಿದಿದ್ದ ಮನೆಗಳು ಇನ್ನಷ್ಟು ಕುಸಿದಿವೆ. ಗಂಜಿ ಕೇಂದ್ರ ತೆರೆದಿದ್ದರೂ ಜನರು ತೆರಳಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next