Advertisement

ಕರಾವಳಿ ಕಾವಲು ಪೊಲೀಸ್‌ ಪಡೆ : ತುರ್ತುಸೇವೆಯ ಸೀ ಆ್ಯಂಬುಲೆನ್ಸ್‌ ಪ್ರಸ್ತಾವನೆ ಮೂಲೆಗುಂಪು!

09:24 AM Sep 03, 2022 | Team Udayavani |

ಉಡುಪಿ : ಸಮುದ್ರದಲ್ಲಿ ಅವಘಡಗಳು ಸಂಭವಿಸಿದರೆ ಪ್ರಾಣ ರಕ್ಷಿಸಲು ಹಾಗೂ ತುರ್ತುಸೇವೆಗೆ ಸೀ-ಆ್ಯಂಬುಲೆನ್ಸ್‌ ಇಲ್ಲದಿರುವುದು ಕರಾವಳಿ ಕಾವಲು ಪೊಲೀಸ್‌ ಪಡೆಗೆ ಬಹಳಷ್ಟು ಹಿನ್ನಡೆಯಾಗಿದೆ.

Advertisement

ಅವಘಡಗಳು ಉಂಟಾದರೆ ಹಾಗೂ ಸಮುದ್ರದಲ್ಲಿ ಮೀನುಗಾರಿಕೆ ಹಡಗುಗಳು ನಾಶವಾದ ಘಟನೆಗಳನ್ನು ಗಮನಿಸಿ ಮೀನುಗಾರರು ಎಸ್‌ಒಎಸ್‌ ಕಳುಹಿಸುವ ಮೂಲಕ ಸಮುದ್ರ ಆ್ಯಂಬುಲೆನ್ಸ್‌ ಅನ್ನು ಕರಾವಳಿ ಕಾವಲು ಪೊಲೀಸ್‌ ಪಡೆಗೆ ಜೋಡಿಸಲು ಬೇಡಿಕೆ ಇತ್ತು. 320 ಕಿ.ಮೀ. ಕರಾವಳಿಯ ಭದ್ರತೆ ಮತ್ತು ಜಾಗೃತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳುವುದರ ಜತೆಗೆ ಸಮುದ್ರ ಮಧ್ಯೆ ಸಿಲುಕುವವ‌ರನ್ನು ರಕ್ಷಿಸುವ ಕೆಲಸವನ್ನೂ ಸಿಎಸ್‌ಪಿಗೆ ವಹಿಸಲಾಗಿತ್ತು.

ಪ್ರಸ್ತಾವ ಮೂಲೆಗುಂಪು
ಮಲ್ಪೆಗೆ ಒಂದು ಸೀ ಆ್ಯಂಬುಲೆನ್ಸ್‌ ಬೇಕೆಂದು ವರ್ಷಕ್ಕೂ ಹಿಂದೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಸೀ ಆ್ಯಂಬುಲೆನ್ಸ್‌ ಕಾರ್ಯಾರಂಭ ಮಾಡಿದರೆ ಸಮುದ್ರ ದಲ್ಲಿ ಅಪಘಾತಗಳ ಸಮಯದಲ್ಲಿ ಮೀನುಗಾರರ ಜೀವ ಉಳಿಸಬಹುದು. ಕರ್ನಾಟಕದ ಸಿಎಸ್‌ಪಿ ಮೂಲಗಳ ಪ್ರಕಾರ, ಕಳೆದ ದಶಕದಲ್ಲಿ 80ಕ್ಕೂ ಹೆಚ್ಚು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಆದರೂ ಆ್ಯಂಬುಲೆನ್ಸ್‌ನಂತಹ ಸರಿಯಾದ ಸೌಲಭ್ಯಗಳಿಲ್ಲದೆ, ಸಂಕಷ್ಟದಲ್ಲಿರುವ ಮೀನುಗಾರರ ಎಸ್‌ಒಎಸ್‌ ಸಂದೇಶಕ್ಕೆ ಹಾಜರಾಗುವುದು ತುಂಬಾ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸಿಎಸ್‌ಪಿ ಸಿಬಂದಿ.

ಇದನ್ನೂ ಓದಿ : ಭಾರೀ ಮಳೆ ಮುನ್ಸೂಚನೆ : ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್‌

ಬಹುಕಾಲದ ಬೇಡಿಕೆ: ಪ್ರಸ್ತುತ ಸಿಎಸ್‌ಪಿಯೊಂದಿಗೆ ಒಂಬತ್ತು 12 ಟನ್‌ ಸಾಮರ್ಥ್ಯದ ದೋಣಿಗಳು ಮತ್ತು 4 ಐದು ಟನ್‌ ಸಾಮರ್ಥ್ಯದ ದೋಣಿಗಳಿವೆ. ಆದರೆ ಕಾರ್ಯಾಚರಣೆ ಸಮಯದಲ್ಲಿ ಈ ದೋಣಿಗಳು ಪರಿಣಾಮಕಾರಿಯಾಗಿರುವುದಿಲ್ಲ. ಸಮುದ್ರ ಆ್ಯಂಬುಲೆನ್ಸ್‌ ಬಹುಕಾಲದ ಬೇಡಿಕೆಯಾಗಿದ್ದು, ಪ್ರತಿಕೂಲ ಹವಾಮಾನದ ಸಮಯ ಇದರ ಅಗತ್ಯತೆ ಹೆಚ್ಚಾಗಿರುತ್ತವೆ ಎನ್ನುತ್ತಾರೆ ಮೀನುಗಾರ ಮುಖಂಡ ದಯಾನಂದ್‌.

Advertisement

ಆಧುನಿಕ ತಂತ್ರಜ್ಞಾನ ಅಳವಡಿಕೆ
ಸಿಎಸ್‌ಪಿಯಲ್ಲಿರುವ 13 ಬೋಟ್‌ಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೇಂದ್ರ, ರಾಜ್ಯ ಸರಕಾರದ ಮುತುವರ್ಜಿಯಲ್ಲಿ ಇದು ನಡೆಯುತ್ತಿದ್ದು, ಈಗಾಗಲೇ ರಾಜ್ಯ ಸರಕಾರ 22 ಕೋ.ರೂ. ಬಿಡುಗಡೆ ಮಾಡಿದೆ.

ಸೀ ಆ್ಯಂಬುಲೆನ್ಸ್‌ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ನಡುವೆ ಬೋಟ್‌ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಸೀ ಆ್ಯಂಬುಲೆನ್ಸ್‌ ಮಂಜೂರಾಗುವ ಸಾಧ್ಯತೆಗಳಿವೆ.
– ಅಬ್ದುಲ್‌ ಅಹದ್‌, ಪೊಲೀಸ್‌ ವರಿಷ್ಠಾಧಿಕಾರಿ, ಕರಾವಳಿ ಕಾವಲು ಪೊಲೀಸ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next