Advertisement
ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ 10 ಎಕರೆ ಜಮೀನನ್ನು ರಾಜ್ಯ ವಿಪತ್ತು ಸ್ಪಂದನ ಪಡೆಯ ತರಬೇತಿ ಕೇಂದ್ರಕ್ಕಾಗಿ 2016ರಲ್ಲಿ ಮೀಸಲಿಡಲಾಗಿತ್ತು. ಆದರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮಾತ್ರ ಇನ್ನೂ ಆರಂಭವಾಗಿಲ್ಲ.
Related Articles
ಎಸ್‌ಡಿಆರ್‌ಎಫ್‌ನ ಒಂದು ಕಂಪೆನಿಗೆ ರಾಜ್ಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ)ಯ 55 ಮಂದಿ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್)ಯ 50, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ 21 ಮಂದಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಒಬ್ಬ ವೈದ್ಯಕೀಯ ಅಧಿಕಾರಿ ಸಹಿತ ಒಟ್ಟು 127 ಮಂದಿ ಅಧಿಕಾರಿ, ಸಿಬಂದಿ ನಿಯೋಜನೆಗೊಳ್ಳಬೇಕು. ಆದರೆ ಮಂಗಳೂರಿನ ತಂಡದಲ್ಲಿರುವುದು 30 ಮಂದಿ ಮಾತ್ರ. ಎಸ್‌ಡಿಆರ್‌ಎಫ್ ರಚನೆಯಾದ ಆರಂಭದಲ್ಲಿ ನಿಯೋಜನೆಗೊಂಡಿದ್ದ ಮಾಜಿ ಸೈನಿಕರ ಗುತ್ತಿಗೆ ಅವಧಿ ಕೊನೆಗೊಂಡಿದೆ. ಗುತ್ತಿಗೆ ನವೀಕರಣ ಆಗದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಂಡಿಲ್ಲ. ಪ್ರಸ್ತುತ ಅಗ್ನಿಶಾಮಕ ದಳದ ಸಿಬಂದಿ ಮತ್ತು ಪೊಲೀಸ್ ಸಿಬಂದಿಯನ್ನು ಐದು ವರ್ಷಗಳ ಅವಧಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ.
Advertisement
ಮುಂಗಾರು ಎದುರಿಸಲು ಸಿದ್ಧತೆಈ ಬಾರಿಯ ಮುಂಗಾರಿನ ಸಂಭಾವ್ಯ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಎಸ್‌ಡಿಆರ್‌ಎಫ್ ಸಿಬಂದಿ ಈಗಾಗಲೇ ಸಜ್ಜಾಗಿದ್ದಾರೆ. ದ.ಕ. ಜಿಲ್ಲೆಯ ಸುಬ್ರಹ್ಮಣ್ಯ ಭಾಗದಲ್ಲಿ ಮತ್ತು ಉಡುಪಿ ಜಿಲ್ಲೆಯಿಂದ ಈ ಬಾರಿ ಎಸ್‌ಡಿಆರ್‌ಎಫ್‌ಗೆ ನಿಯೋಜನೆಗೆ ಸಂಬಂಧಿಸಿ ಸೂಚನೆ ಬರುವ ಸಾಧ್ಯತೆಯಿದೆ. ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಸಿಬಂದಿ ನಿಯೋಜಿಸಲಾಗುತ್ತದೆ. ಕಾರ್ಯಾಚರಣೆಗೆ ಬೇಕಾದ ಸಲಕರಣೆ, ವಾಹನಗಳನ್ನು ಸಿದ್ಧಪಡಿಸಿ ಕೊಳ್ಳಲಾಗಿದೆ. ತಂಡಕ್ಕೆ ಬೇಕಾದ ತರಬೇತಿಯನ್ನೂ ನಿರಂತರವಾಗಿ ನೀಡಲಾಗುತ್ತಿದೆ. ಬೋಟಿಂಗ್ ತರಬೇತಿ, ಉಪಕರಣಗಳ ಬಳಕೆಗೆ ಸಂಬಂಧಿಸಿದ ತರಬೇತಿ ನೀಡಲಾಗಿದೆ. ನುರಿತ ಅಗ್ನಿಶಾಮಕರು, ಚಾಲಕರು, ತಂತ್ರಜ್ಞರು, ಈಜು ಪಟುಗಳನ್ನು ತಂಡ ಒಳಗೊಂಡಿದೆ. ಕಟೀಲು ಬಳಿಯ ಬಡಗ ಎಕ್ಕಾರು ಎಂಬಲ್ಲಿ ಎಸ್‌ಡಿಆರ್‌ಎಫ್‌ಗೆ 10 ಎಕರೆ ಭೂಮಿ ಈಗಾಗಲೇ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ರಾಜ್ಯ ಸರಕಾರಕ್ಕೆ ಒಂದು ಬಾರಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಇನ್ನೊಂದು ಬಾರಿ ಪ್ರಸ್ತಾವನೆ ಕಳುಬಹಿಸಲು ಉದ್ದೇಶಿಸಲಾಗಿದೆ. ಸರಕಾರದಿಂದ ಶೀಘ್ರ ಅನುಮತಿ ದೊರೆಯಬೇಕಿದೆ.
– ಎಂ.ಎ. ಶರತ್, ಡೆಪ್ಯುಟಿ ಕಮಾಂಡೆಂಟ್, ಎಸ್‌ಡಿಆರ್‌ಎಫ್ ಬಿ. ಕಂಪೆನಿ, ಮಂಗಳೂರು -ಭರತ್ ಶೆಟ್ಟಿಗಾರ್