Advertisement

ಬಿಜೆಪಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ

12:25 PM Jul 18, 2017 | Team Udayavani |

ಮೈಸೂರು: ಕರಾವಳಿಯಲ್ಲಿ ಭಾಗದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವ ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಸ್‌ಡಿಪಿಐ ಕಾರ್ಯಕರ್ತರು ಒತ್ತಾಯಿಸಿದರು.

Advertisement

ನಗರದ ಉದಯಗಿರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇಬ್ಬರು ಅಮಾಯಕರ ಕೊಲೆ ಹಾಗೂ 12 ಚೂರಿ ಇರಿತ ಪ್ರಕರಣಗಳು ನಡೆದಿದೆ.

ಇವೆಲ್ಲದರ ಪರಿಣಾಮ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 144 ಸೆಕ್ಷನ್‌ ಜಾರಿಯಲ್ಲಿದೆ. ಹೀಗಿದ್ದರೂ ಇತ್ತೀಚೆಗೆ ನಡೆದ ಶರತ್‌ ಮಡಿವಾಳ ಕೊಲೆ ಖಂಡಿಸುವ ನೆಪದಲ್ಲಿ ಬಿಜೆಪಿ ಸಂಸದರಾದ ಶೋಭಾ ಕಂರದ್ಲಾಜೆ, ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸ್ಥಳೀಯ ವಾತಾವರಣವನ್ನು ಮತ್ತಷ್ಟು ಪ್ರಕ್ಷುಬ್ಧವಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.

ಶರತ್‌ ಸಾವಿನ ಪ್ರಕರಣ ತನಿಖೆ ಹಂತದಲ್ಲಿದ್ದರೂ ಬಿಜೆಪಿ ಸಂಸದರು ಇದನ್ನು ಕೊಲೆ ಎಂದು ಆರೋಪಿಸಿ, ಅದನ್ನು ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಮೇಲೆ ಹೊರಿಸಲು ಹೊರಟಿರುವುದು ಸರಿಯಲ್ಲ. ಬಿಜೆಪಿ ನಾಯಕರ ಈ ಆರೋಪ ಪೊಲೀಸರ ತನಿಖೆಯ ದಿಕ್ಕುತಪ್ಪಿಸುವ ಹುನ್ನಾರವಾಗಿದ್ದು, ಈ ನಿಟ್ಟಿನಲ್ಲಿ ಸೂತಕದ ಮನೆಯಲ್ಲಿ ರಾಜಕೀಯ ಮಾಡುವ ರಾಜಕಾರಣಿಗಳನ್ನು ಕಾನೂನಿನ ಚೌಕಟ್ಟಿಗೆ ಸೇರಿಸುವವರೆಗೂ ಇಂತಹ ಕೋಮು ದ್ವೇಷಗಳು ಅಂತ್ಯಗೊಳ್ಳುವುದಿಲ್ಲ.

ಆದ್ದರಿಂದ ಸಂಸದರಾದ ಬಿ.ಎಸ್‌.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಜತೆಗೆ ಕೋಮು ಸಂಘರ್ಷ ಹಾಗೂ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಬಿಜೆಪಿ ಸಂಸದರು, ಶಾಸಕರು, ಸಂಘಪರಿವಾರದ ನಾಯಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌, ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪಿಎಫ್ಐ ರಾಜ್ಯ ಖಜಾಂಚಿ ಮೊಹಮ್ಮದ್‌ ಫಾರೂಕ್‌, ಜಿಲ್ಲಾಧ್ಯಕ್ಷ ಅಮೀನ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next