ಉಪ್ಪಿನಂಗಡಿ: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮತ್ತು ಮೋಸ ಮಾಡುತ್ತಲೇ ಜನರಿಂದ ದೂರವಾಗಿ, ನಿರ್ನಾಮದ ಹಂತಕ್ಕೆ ಬಂದು ನಿಂತಿದೆ. ನರೇಂದ್ರ ಮೋದಿ ಅವರೂ ಚೌಕಿದಾರ ಅಲ್ಲ, ದೇಶವನ್ನು ಕೊಳ್ಳೆ ಹೊಡೆಯುವವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ಎಸ್‌ಡಿಪಿಐ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ರೆçಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆದಾಗ, ಟಿ.ವಿ. ನಿರೂಪಕ ಪ್ರವಾದಿ ನಿಂದನೆ ಮಾಡಿದಾಗ ಅದನ್ನು ಖಂಡಿಸಿ, ಅದರ ವಿರುದ್ಧವಾಗಿ ಹೋರಾಟ ಮಾಡಿದ್ದು ಎಸ್‌ಡಿಪಿಐ. ರೈತರು, ದಲಿತರ, ಕ್ರೆçಸ್ತ, ಅಲ್ಪಸಂಖ್ಯಾಕರ ರಕ್ಷಣೆಯ ಜತೆಗೆ ಅವರ ಪರವಾಗಿ ಹೋರಾಟ ಮಾಡುವ ಪಕ್ಷ ನಮ್ಮದು ಎಂದರು.
ದೇಶದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲಾಗುತ್ತಿದೆ. ಕೇವಲ ಭಾಷಣ ಮಾಡುವುದರಿಂದ ದೇಶ ಅಭಿವೃದ್ಧಿ ಆಗುವುದಿಲ್ಲ. ನೋಟು ಬ್ಯಾನ್‌ನಿಂದಾಗಿ ದೇಶದಲ್ಲಿ ಮೋದಿ ವಿರುದ್ಧ ಕಣ್ಣೀರ ಅಲೆ ಇದೆ. ಬಡ ರೈತರ ಸಾಲ ಮನ್ನಾ ಮಾಡದ ಮೋದಿ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ಟೀಕಿಸಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಲೊ#àನ್ಸಾ ಪ್ರಾಂಕ್ಸ್ ಮಾತನಾಡಿ, ಚರ್ಚ್ ಧಾಳಿ ನಡೆದಾಗ ಯಾವೊಬ್ಬ ಕಾಂಗ್ರೆಸಿಗರೂ ಮಾತನಾಡಲಿಲ್ಲ. ಆಗ ಹೋರಾಟ, ಪ್ರತಿಭಟನೆ ಮಾಡಿದ್ದು ಎಸ್‌ಡಿಪಿಐ. ಬಿಜೆಪಿ ಪಕ್ಕಾ ಹಿಂದುತ್ವ ಪ್ರತಿಪಾದಿಸುತ್ತಿದೆ, ಕಾಂಗ್ರೆಸ್ ಮೃದು ಹಿಂದುತ್ವ ಹೊಂದಿದೆ. ಆದರೆ ಎಸ್‌ಡಿಪಿಐ ಮಾನವತ್ವವನ್ನು ಹೊಂದಿದೆ ಎಂದರು.
ದ.ಕ. ಜಿಲ್ಲಾ ಎಸ್‌ಡಿಪಿಐ ಸದಸ್ಯ ಆನಂದ ಮಿತ್ತಬೈಲ್ ಮಾತನಾಡಿ, 5 ವರ್ಷಗಳ ಕಾಲ ಮನುಸ್ಮತಿ ಧೋರಣೆಯ ಕೋಮು ಶಕ್ತಿ ದೇಶವನ್ನು ಆಳಿ ದೇಶದ ಎಲ್ಲೆಡೆ ಅತ್ಯಾಚಾರ, ಕಗ್ಗೊಲೆಗಳೇ ನಡೆದು ಹೋದವು. ಆದರೆ ನಮಗೆ ಸಹೋದರತೆ, ಏಕತೆಯ ಭಾತೃತ್ವದ ಅಂಬೇಡ್ಕರ್ ಸ್ಮತಿ ಆಧಾರದ ಆಡಳಿತ ಬೇಕಾಗಿದೆ, ಅದು ಎಸ್‌ಡಿಪಿಐಯಿಂದ ಮಾತ್ರ ಸಾಧ್ಯ ಎಂದರು.
ವೇದಿಕೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷ ಕೆ.ಎ. ಸಿದ್ದಿಕ್, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್, ಜಿಲ್ಲಾ ಉಪಾಧ್ಯಕ್ಷ ಐ.ಎಂ.ಆರ್., ಇಕ್ಬಾಲ್, ಉಪ್ಪಿನಂಗಡಿ ಸಮಿತಿ ಅಧ್ಯಕ್ಷ ಬಿ.ಕೆ. ಸುಲೈಮಾನ್ ಉಪಸ್ಥಿತರಿದ್ದರು.
ಅಬ್ದುಲ್ ರಜಾಕ್ ಸೀಮಾ ಸ್ವಾಗತಿಸಿ, ಇಕ್ಬಾಲ್ ಕೆಂಪಿ ವಂದಿಸಿದರು. ರಿಲ್ವಾನ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು.
ರೋಡ್ ಶೋ
ಸಾರ್ವಜನಿಕ ಸಭೆಗೆ ಮುನ್ನ ಎಸ್‌ಡಿಪಿಐ ಕಾರ್ಯಕರ್ತರು ಗಾಂಧಿ ಪಾರ್ಕ್ ಬಳಿ ಜಮಾಯಿಸಿ ಬ್ಯಾಂಕ್ ರಸ್ತೆಯಾಗಿ, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿ ರೋಡ್ ಶೋ ನಡೆಸಿದರು.