ಹರಿಹರ: ಹಿಂದಿನ ಸರ್ಕಾರಗಳು ಅನುಸರಿಸಿದ ಉದಾರ ನೀತಿ ಹಾಗೂ ಬೆಂಬಲದಿಂದ ಎಸ್‌ಡಿಪಿಐ ಉದ್ಧಟತನ ತೋರುತ್ತಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಹೊರವಲಯದ ಕಾಗಿನೆಲೆ ಶಾಖಾ ಮಠದಲ್ಲಿ ಗುರುವಾರ ನಡೆದ ಎಸ್‌ಟಿ ಮೀಸಲಾತಿ ಹೋರಾಟದ ಚಿಂತನ ಸಭೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇವಲ ನಾಲ್ಕೇ ನಾಲ್ಕು ಗ್ರಾಪಂ ಚುನಾವಣೆಯಲ್ಲಿ ಜಯಗಳಿಸಿದೊಡನೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಎಸ್ ಡಿಪಿಐ ಕಾರ್ಯಕರ್ತರ ಮನಃಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದರು. ಎಸ್‌ಡಿಪಿಐ ಎಸಗಿರುವುದು ದೇಶದ್ರೋಹದ ಕೃತ್ಯ, ದೇಶಕ್ಕೆ ಮಾಡಿದ ಅವಮಾನ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಇದನ್ನೂ ಓದಿ:ಗದ್ದುಗೆ ಹಿಡಿಯಲು ಪಕ್ಷಗಳ ಪೈಪೋಟಿ
ಹಿಂದಿನ ಸರ್ಕಾರಗಳು ನೀಡಿದ ಬೆಂಬಲದಿಂದ ಎಸ್‌ಡಿಪಿಐ ಈ ರೀತಿಯ ಅತಿರೇಕದ ಹೇಳಿಕೆ ನೀಡುವ ಮಟ್ಟಕ್ಕೆ ಬೆಳೆದಿದೆ. ಇಂತಹ ಸಂಘಟನೆಯ ವಿರುದ್ಧ ಬಿಜೆಪಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಇಂಥವರನ್ನು ಮಟ್ಟ ಹಾಕುವುದು ಹೇಗೆಂದು ನಮಗೆ ಗೊತ್ತಿದೆ. ದೇಶದ್ರೋಹ ಹೇಳಿಕೆ ಕೂಗಿರುವ ನಾಲ್ವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದರು.
ಸಿಎಂ ಯಡಿಯೂರಪ್ಪ ಅನಾರೋಗ್ಯದಿಂದ ಕಚೇರಿ ಕೆಲಸ ಮಾಡುತ್ತಿಲ್ಲವೆಂದು ಶಾಸಕ ಯತ್ನಾಳ್ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾರೋ ಕುಡಿದು ನಶೆಯಲ್ಲಿ ಮಾತನಾಡಿದ್ದನ್ನೆಲ್ಲಾ ಕೇಳ್ಳೋಕೆ ಆಗುತ್ತಾ, ನಮ್ಮವರೇ ಆಗಿರಲಿ, ಬೇರೆಯವರೆ ಆಗಿರಲಿ ಎಂದರು.