ಶಿವಮೊಗ್ಗ: ಸ್ವಾತಂತ್ರ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಚಿತ್ರವನ್ನು ಹಾಕಿರುವ ವಿಚಾರಕ್ಕೆ ಎಸ್ ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸ್ವಾತಂತ್ರದ 75 ವರ್ಷವಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನಲ್ಲಿ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಹಾಕಿ ಅಲಂಕರಿಸಲಾಗಿತ್ತು. ಈ ಭಾವಚಿತ್ರಗಳ ಮಧ್ಯದಲ್ಲಿ ಸಾವರ್ಕರ್ ಭಾವಚಿತ್ರ ಗಮನಿಸಿದ ಎಸ್ ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಿಟಿ ಸೆಂಟರ್ ಮಾಲ್ ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಾವರ್ಕರ್ ಸ್ವಾತಂತ್ರ ಹೋರಾಟಗಾರರೇ ಅಲ್ಲ, ಅವರ ಭಾವಚಿತ್ರ ಯಾಕೆ ಹಾಕಿದ್ದೀರಿ? ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ ಹೋರಾಟಗಾರನಾಗಲು ಸಾಧ್ಯ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ:ಹರ್ ಘರ್ ತಿರಂಗಾ: ಗುಡಿಸಲು,ಜಮೀನಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ
ಅಲ್ಲದೆ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಪ್ರತಿಭಟನೆ ಆರಂಭಿಸಿದರು. ಸ್ವಾತಂತ್ರಕ್ಕಾಗಿ ಜೀವ ಕೊಟ್ಟವರ ಭಾವಚಿತ್ರ ಹಾಕುವಂತೆ ಎಸ್ ಡಿಪಿಐ ಕಾರ್ಯಕರ್ತರು ಪಟ್ಟು ಹಿಡಿದರು. ಈ ವೇಳೆ ಸಾವರ್ಕರ್ ಭಾವಚಿತ್ರದೊಂದಿಗೆ ಅಬ್ದುಲ್ ಕಲಾಮ್ ಅಜಾದ್ ಅವರ ಭಾವಚಿತ್ರ ಹಾಕುವುದಾಗಿ ಹೇಳಿದ ಮಾಲ್ ಸಿಬ್ಬಂದಿ ಸಮಸ್ಯೆ ಪರಿಹರಿಸಿಕೊಂಡರು.