ಧಾರವಾಡ: ಇಲ್ಲಿಯ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಮೂರನೇ ವರ್ಷಾಚರಣೆ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಈಶಾವಾಸ್ಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ವರ್ಚುವಲ್ ಮೂಲಕ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ, ಮೂರನೇ ವರ್ಷಾಚರಣೆಯ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದ ವಿವಿ ಕುಲಪತಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಿಶ್ವವಿದ್ಯಾಲಯದ ಮುಂದಿನ ಪಯಣ ಇನ್ನೂ ಸಾಕಷ್ಟಿದೆ. ವಿದ್ಯಾರ್ಥಿಗಳು ಸಂಸ್ಥೆಯ ಶಿಸ್ತುಬದ್ಧ ಪರಿಸರ ಮತ್ತು ವಾತಾವರಣ ನೋಡಿ ಇಲ್ಲಿಗೆ ಬರಬೇಕೆಂದು ಇಚ್ಛಿಸುತ್ತಾರೆ. ಕೊರೊನಾ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ವೈದ್ಯರು ಮತ್ತು ಸಿಬ್ಬಂದಿಗೆ ಹೃತೂ³ರ್ವಕ ಅಭಿನಂದನೆಗಳು ಎಂದರು.
ಎಸ್‌ಡಿಎಂ ವಿವಿ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಎಸ್‌ಡಿಎಂ ವಿಶ್ವವಿದ್ಯಾಲಯವು ಉನ್ನತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಸ್ಥಾಪಿತವಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಪ್ರಾಯೋಗಿಕತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉನ್ನತ ಮಟ್ಟದ ಶಿಕ್ಷಣ ಹಾಗೂ ವೈದ್ಯರನ್ನು ಸಮಾಜಕ್ಕೆ ಒದಗಿಸುವುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
ಮಣಿಪಾಲದ ಮಾಜಿ ಉಪಕುಲಪತಿ ಡಾ| ಕೆ.ರಾಮನಾರಾಯಣ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆ, ತಂತ್ರಜ್ಞಾನದಿಂದ ಕಲಿಯುವಿಕೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗ್ಗೆ ತಿಳಿಸಿದರು. ಪದ್ಮಲತಾ ನಿರಂಜನ, ಸಾಕೇತ ಶೆಟ್ಟಿ, ಡಾ| ಎಸ್.ಕೆ. ಜೋಶಿ, ಜೀವಂಧರಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು ಇದ್ದರು. ಮೂರನೇಯ ವರ್ಷಾಚರಣೆ ಸವಿನೆನಪಿಗಾಗಿ ಕೇಕ್ ಕತ್ತರಿಸಲಾಯಿತು. ಡಾ| ಐಶ್ವರ್ಯ ನಾಯಕ ಪ್ರಾರ್ಥಿಸಿದರು. ಕುಲಸಚಿವ ನಿವೃತ್ತ ಲೆಪ್ಟಿನಂಟ್ ಕರ್ನಲ್ ಯು.ಎಸ್.ದಿನೇಶ ಸ್ವಾಗತಿಸಿ, ವಾರ್ಷಿಕ ವರದಿ ಒಪ್ಪಿಸಿದರು. ಎಸ್ ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ ಅವರು ವರ್ಚುವಲ್ ಆಗಿ ಕಾರ್ಯಕ್ರಮ ವೀಕ್ಷಿಸಿದರು.
ಎಸ್‌ಡಿಎಂ ರಿಬ್ಸ್ನ ಪ್ರಾಂಶುಪಾಲ ಡಾ| ಪಾಲಾಕ್ಷ ಕೆ.ಜೆ. ಪರಿಚಯಿಸಿದರು. ಡಾ| ವೆಂಕಟೇಶ ನಾಯಕಮಾಸೂರ ನಿರೂಪಿಸಿದರು. ಎಸ್‌ಡಿಎಂ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ| ಚಿದೇಂದ್ರ ಶೆಟ್ಟರ ವಂದಿಸಿದರು.