Advertisement
ಸಮಾಜದಲ್ಲಿ ಅನಾಚಾರ,ದುಷ್ಕೃತ್ಯಗಳು ತಾಂಡವವಾಡುತ್ತಲೇ ಇದೆ. ಭ್ರಷ್ಟಾಚಾರ,ಲಂಚಕೋರತನ, ಹಿರಿ ಜೀವಗಳ ಮೇಲಿನ ಅಸಡ್ಡೆ , ಹೊನ್ನು,ಹೆಣ್ಣು,ಮಣ್ಣಿನ ವ್ಯಾಮೋಹ ಮನುಷ್ಯನನ್ನು ಮೃಗಸದೃಶವನ್ನಾಗಿಸಿದೆ. ಇವನ್ನೆಲ್ಲಾ ಖಂಡಿಸಬೇಕಾಗಿದ್ದ ಬುದ್ಧಿವಂತ,ವಿಚಾರವಂತ ಮನುಷ್ಯನೇ ಅವುಗಳನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಇದಕ್ಕೆಲ್ಲ ಹಿಡಿದ ಕೈಗನ್ನಡಿಯೆಂಬಂತೆ ಇದೆ “ತಲ್ಲಣ’ ಪ್ರಹಸನ. ಈ ಪ್ರಹಸನದಲ್ಲಿ ಮಾನಸಿಕ ಅಸ್ವಸ್ಥರೆಂದು ಹುಚ್ಚಾಸ್ಪತ್ರೆ ಸೇರಿದ ವ್ಯಕ್ತಿಗಳು ಸಮಾಜದಲ್ಲಾಗುತ್ತಿರುವ ತಲ್ಲಣಗಳ ಎಳೆಯನ್ನು ಬಿಚ್ಚುತ್ತಾ ಹೋಗುತ್ತಾರೆ.ಶಾಂತಿಧಾಮವೆಂದು ಆ ಚಿಕಿತ್ಸಾಲಯಕ್ಕೆ ಹೆಸರಿಡಲಾಗಿದೆ. ಎಸ್‌ಡಿಎಂ ರಂಗ ಅಧ್ಯಯನ ಕೇಂದ್ರ ಉಜಿರೆ ತಂಡದ ಪ್ರಸ್ತುತಿ,ಸ್ಮಿತೇಶ್ ಬಾರ್ಯ ರವರ ಪರಿಕಲ್ಪನೆ ಹಾಗೂ ನಿರ್ದೇಶನ ಮತ್ತು ಯಶವಂತ್ ಬೆಳ್ತಂಗಡಿ ಇವರ ಸಹಕಾರದಲ್ಲಿ ತಲ್ಲಣ ಪ್ರಹಸನ ಮನೋಜ್ಞವಾಗಿ ಮೂಡಿಬಂದಿದೆ. ವಿದ್ಯಾರ್ಥಿಗಳು ತಮ್ಮ ಅಭಿನಯದಿಂದ ಜನರ ಮನಸ್ಸನ್ನು ಗೆದ್ದಿ¨ªಾರೆ. ಸುಶ್ರಾವ್ಯವಾದ ಹಿನ್ನೆಲೆ ಗಾಯನವೂ ಪ್ರಹಸನದ ಯಶಸ್ವಿಗೆ ಕಾರಣವಾಗಿದೆ.
Related Articles
Advertisement
ಅನ್ಯಾಯಗಳನ್ನು ಕಂಡು ಕಾಣದಂತೆ ಅದನ್ನು ನೀರೆರೆದು ಪೋಷಿಸುತ್ತಿರುವ ಮಾನವ ಕುಲಕ್ಕೆ ಪ್ರಶ್ನೆಯೆಂಬಂತೆ ಮಾನಸಿಕ ತೊಂದರೆಗಳಿರುವ ವ್ಯಕ್ತಿಗಳಿಗೆ ಅವರದ್ದೇ ಆದ ಪ್ರಪಂಚವಿದೆ,ಅವರದ್ದೇ ಆದ ಬದುಕಿದೆ, ಮನಸ್ಥಿತಿಯಿದೆ. ಅವರ ಮನದಲ್ಲಿ ಯಾವುದೇ ಕಲ್ಮಶಗಳಿಲ್ಲ. ಆದರೆ ಅವರನ್ನು ಹುಚ್ಚರು ಅನ್ನೋ ಮೊದ್ಲು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಬೇಕಾಗುತ್ತದೆ, ಅವರ ಹುಚ್ಚಿಗೆ ಮಾತ್ರೆ ತಗೊಳ್ತಾರೆ, ಆದ್ರೆ ನಮ್ಮ ಹುಚ್ಚಿಗೆ…?ಈ ಪ್ರಶ್ನೆಯ ಮೂಲಕ ಪ್ರಹಸನ ಕೊನೆಗೊಳ್ಳುತ್ತದೆ. ಉತ್ತಮ ರಂಗಸಜ್ಜಿಕೆ,ಬೆಳಕು,ಹಿನ್ನಲೆ ಧ್ವನಿ ಮತ್ತು ಸಂಗೀತ ತಲ್ಲಣ ಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ.
ರಶ್ಮಿ ಯಾದವ್ ಕೆ.