ದೇಶದ ಯಾವುದೇ ಭಾಗಕ್ಕೆ ಹೋದರೂ ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಸಾಧಕ ಮಹಾತ್ಮರ ಪುತ್ಥಳಿ, ಮೂರ್ತಿಗಳು ಕಾಣಸಿಗುತ್ತವೆ. ಆದರೆ ಮಹಿಳಾ ಸಾಧಕಿಯರ ಶಿಲ್ಪಗಳು? ಇದು ಅಪರೂಪ. ಆದರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆವರಣಕ್ಕೆ ಬಂದರೆ, ಎಲ್ಲಾ ಸಾಧಕಿಯರನ್ನು ಕಣ್ತುಂಬಿಕೊಂಡು ಹೋಗಬಹುದು.
ನಾಡಿನ ಖ್ಯಾತ ಕಲಾವಿದ ರಾಜಹರ್ಷ.ಟಿ. ಸೊಲಬಕ್ಕನವರ್ ಅವರೊಂದಿಗೆ 100 ಕಲಾವಿದರು, ಕುಲಪತಿ ಪ್ರೊ.ಸಬೀನಾ ಭೂಮಿಗೌಡ ಅವರ ಕನಸಿನ ಈ ಕಲಾ ಗ್ರಾಮಕ್ಕೆ ಜೀವ ನೀಡಿದ್ದಾರೆ.
ಆಡಳಿತ ಕಚೇರಿ ಎದುರು ಮಹಾಶರಣೆ ಅಕ್ಕಮಹಾದೇವಿಯ 16 ಅಡಿ ಆಳೆತ್ತರದ ಹಾಗೂ 3.5 ಟನ್ ತೂಕದ ಬೃಹತ್ ಮೂರ್ತಿ ತಲೆ ಎತ್ತಿದೆ. ಇದನ್ನು ನೋಡಿದವರಿಗೆ 12ನೇ ಶತಮಾನದ ಅಕ್ಕಮಹಾದೇವಿ ಮತ್ತೆ ಹುಟ್ಟಿ ಬಂದಳೆ ಅನಿಸಿದರೆ ಅಚ್ಚರಿಯಿಲ್ಲ.
ಇದರ ಜೊತೆಗೆ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿದ ಖ್ಯಾತ ಮಹಿಳಾ ಸಾಧಕಿಯರ ಶಿಲ್ಪಗಳೂ ಇಲ್ಲಿವೆ. ಅದರಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ, ಅಸಹಾಯಕರ ಕಣ್ಣು ತೆರೆಸಿದ ಮದರ್ ತೆರೇಸಾ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ವೀರರಾಣಿ ಕಿತ್ತೂರು ಚೆನ್ನಮ್ಮ, ಚಾಂದ್‌ಬೀಬಿ, ಸಾಲುಮರದ ತಿಮ್ಮಕ್ಕ, ಮೇಡಂ ಮೇರಿ ಕ್ಯೂರಿ, ಟೆನಿಸ್ ತಾರೆ ಸಾನಿಯಾ ಮಿಜಾì, ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ, ಭಾರತ ರತ್ನ ಎಂ.ಎಸ್ ಸುಬ್ಬಲಕ್ಷ್ಮೀ , ಪಿ.ಟಿ ಉಷಾ ಸೇರಿದಂತೆ 20 ಸಾಧಕಿಯರ ಸುಂದರ ರಾಕ್ ಕಲಾಕೃತಿಗಳು ಮಂತ್ರಮುಗªಗೊಳಿಸುತ್ತವೆ.
ಮುಖ್ಯದ್ವಾರದ ಆರಂಭದಲ್ಲೇ ಹಳ್ಳಿ ಪರಂಪರೆಯಿಂದ ಜಾಗತಿಕ ಮಟ್ಟದ ಆಧುನಿಕ ಪರಂಪರೆಯ ಕಲಾಕೃತಿಗಳ ಅನಾವರಣವಾಗಿದೆ. ಬದುಕು ಬಿಂಬಿಸುವ ಚಿತ್ರಣವಿದೆ. ಅಲ್ಲಿನ ಜನಜೀವನ, ಬಾಲಕಿಯರ ಶಿಕ್ಷಣ, ಮಹಿಳೆಯರ ಕೆಲಸದ ಒತ್ತಡ, ಗ್ರಾಮದ ಬಾಲಕಿ ಹಂತ-ಹಂತವಾಗಿ ಪಟ್ಟಣ, ನಗರ ಪ್ರದೇಶಕ್ಕೆ ಕಾಲಿಟ್ಟು ಉನ್ನತ ಶಿಕ್ಷಣ ಪಡೆಯುವ ಹಂತಗಳನ್ನು ಇಲ್ಲಿ ಕೆತ್ತಿಟ್ಟಿದ್ದಾರೆ. ಈ ಮೂರ್ತಿಗಳ ಜೊತೆಗೆ ವೈದ್ಯ, ನ್ಯಾಯವಾದಿ, ಸ್ನಾತಕೋತ್ತರ ಪದವೀಧರೆ, ಮಹಿಳೆಯರ ಧ್ಯಾನ, ಓದುವ ಭಂಗಿಗಳು ಗಮನಸೆಳೆಯುತ್ತವೆ.
ಹೆಚ್ಚಾ ಕಡಿಮೆ ಶಿಲ್ಪಗಳ ರಚನೆಗಾಗಿಯೇ 50ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸಲಾಗಿದೆ. ಈ ಶಿಲ್ಪಗಳನ್ನು ಇಟ್ಟಿಗೆ, ಮರಳು, ಕಬ್ಬಿಣ, ಸಿಮೆಂಟ್ ಬಳಸಿ ಅತ್ಯಾಕರ್ಷಕವಾಗಿ ರಚಿಸಲಾಗಿದೆ. ಒಂದೊಂದು ಶಿಲ್ಪವೂ ಸುಮಾರು 6.5 ಅಡಿಯಷ್ಟು ಎತ್ತರವಾಗಿದ್ದು, ಸುಮಾರು 450 ಕೆ.ಜಿ ಭಾರವಿದೆ. ಈ ಶಿಲ್ಪಗಳು ಸುಮಾರು 100ರಿಂದ 150 ವರ್ಷಗಳವರೆಗೆ ಬಾಳಿಕೆ ಬರುವ ಅಂದಾಜಿದೆ ಎನ್ನುತ್ತಾರೆ ವಿವಿ ಅಧಿಕಾರಿಗಳು. ಇವುಗಳ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ವಿಜಯಪುರಕ್ಕೆ ಹೋದರೆ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಮಹಿಳಾ ವಿವಿಯನ್ನು ಸೇರಿಸುವುದು ಮರೆಯಬೇಡಿ. ಇದೂ ಕೂಡ ನೋಡಲೇಬೇಕಾದ, ಭೇಟಿ ನೀಡಲೇ ಬೇಕಾದ ಸ್ಥಳ.
ಗುರುರಾಜ.ಕನ್ನೂರ