Advertisement

ಕೃಷಿಕರ ಮಂದಿರದಲ್ಲಿ ಪುತ್ಥಳಿಯ ಭಾವಬಂಧ

12:07 PM Jan 25, 2018 | |

ಒಂದೊಂದು ಧರ್ಮ, ಮತಗಳಿಗೂ ಆರಾಧನಾ ಕೇಂದ್ರಗಳಿವೆ. ಕೃಷಿಕರ ಪಾಲಿಗೆ ಕ್ಯಾಂಪ್ಕೊ ಸಂಸ್ಥೆಯೇ ಮಂದಿರ ಯಾ ದೇವಾಲಯ! ಹೀಗಂದವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು. ಪುತ್ತೂರಿನ ಕ್ಯಾಂಪ್ಕೊ ಚಾಕೋಲೇಟ್‌ ಫ್ಯಾಕ್ಟರಿಯ “ಸೌಲಭ್ಯ ಸೌಧ’ದ ಶುಭ ಚಾಲನೆಯ ಸಂದರ್ಭ. ಇಲ್ಲಿ ಶಬ್ದಾರ್ಥ ಕ್ಕಿಂತಲೂ ಅದರೊಳಗಿರುವ ಅಂತರಾರ್ಥ ಗ್ರಾಹ್ಯ. ಕೃಷಿಕರು ಕಟ್ಟಿ ಬೆಳೆಸಿದ ಕೃಷಿಕರ ಸಂಸ್ಥೆಯು ಕೃಷಿಕರ ಪಾಲಿಗೆ ಎಂದಿಗೂ, ಎಂದೆಂದಿಗೂ ದೇವಾಲಯಕ್ಕೆ ಸಮಾನ. 

Advertisement

ಕ್ಯಾಂಪ್ಕೊ ಸಂಸ್ಥೆಯ ಹುಟ್ಟಿಗೆ ಶ್ರೀಕಾರ ಬರೆದವರು ಕೀರ್ತಿಶೇಷ ವಾರಣಾಶಿ ಸುಬ್ರಾಯ ಭಟ್‌. ಆರಂಭದ ಕಾಲಘಟ್ಟದಲ್ಲಿ ಕೃಷಿಕರು ವಾರಣಾಶಿಯವರ ಬೆನ್ನ ಹಿಂದೆ ನಿಂತು ಕ್ಯಾಂಪ್ಕೊವನ್ನು ಕಟ್ಟುವಲ್ಲಿ ಹಿಂಬಲ ನೀಡಿದರು. ಇದು ವಾರಣಾಶಿಯವರ ಛಲಕ್ಕೆ ದೊಡ್ಡ ಅಡಿಗಟ್ಟಾಯಿತು. 1973ರಲ್ಲಿ ಕ್ಯಾಂಪ್ಕೊ ಸ್ಥಾಪನೆ ಯಾಯಿತು. ಮತ್ತಿನದು ಇತಿಹಾಸ. 

ಸೌಲಭ್ಯ ಸೌಧದ ಉದ್ಘಾಟನೆಯಂದು ವಾರಣಾಶಿ ಸುಬ್ರಾಯ ಭಟ್ಟರ ಶಿಲಾ ಪುತ್ಥಳಿಯ ಅನಾವರಣ. ಕೃಷಿಕ ಸಾಧಕನಿಗೆ ಸಂದ ಮಹತ್‌ ಗೌರವ. “ದೇಶದಲ್ಲಿ ಕೃಷಿಕರ ಪುತ್ಥಳಿ ಎಲ್ಲಿದೆ? ಎಲ್ಲಾದರೂ ಸ್ಥಾಪನೆಯಾದುದು ನೋಡಿದಿರಾ? ಇದು ವಿಪರ್ಯಾಸವಲ್ವಾ’ ಎಂದು ಮಿತ್ರ ನರೇಂದ್ರ ರೈ ದೇರ್ಲರು ಗಟ್ಟಿ ದನಿಯಲ್ಲಿ ಹೇಳುತ್ತಿದ್ದ ಮಾತುಗಳು ಈ ಸಂದರ್ಭದಲ್ಲಿ ನೆನಪಾದುವು. 

ಹೌದಲ್ಲಾ…ರಾಜಕೀಯ, ಧಾರ್ಮಿಕ, ಸಾಮಾಜಿಕ ಮೊದ ಲಾದ ಕ್ಷೇತ್ರಗಳ ಸಾಧಕರ ಪುತ್ಥಳಿಗಳನ್ನು ನೋಡುತ್ತೇವೆ. ಸ್ವದುಡಿಮೆಯಿಂದ ಸಮಾಜಕ್ಕೆ ಅನ್ನ ನೀಡುವ ರೈತರಿಗೆ ಪುತ್ಥಳಿಯ ಭಾಗ್ಯ ಎಲ್ಲಿದೆ? ಪುತ್ಥಳಿ ಬಿಡಿ, ಬದುಕಿರುವಾಗಲೇ ಸಾಧನೆಗೆ ಬೆಳಕೊಡ್ಡುವ, ಗೌರವಿಸುವ ವ್ಯವಸ್ಥೆಗಳು ಎಷ್ಟಿವೆ? ಗೌರವದಿಂದ ಬದುಕಲು ಬೇಕಾದ ಕನಿಷ್ಠ ಸೌಲಭ್ಯವನ್ನಾದರೂ ಪ್ರಾಮಾಣಿಕತೆ ಯಿಂದ ನೀಡುತ್ತಿದ್ದೇವಾ? ವ್ಯವಸ್ಥೆಗಳ ಆತ್ಮವಿಮರ್ಶೆಗಳಿಗಿದು ಹೂರಣ. 

ಕ್ಯಾಂಪ್ಕೊ ತನ್ನ ಸ್ಥಾಪಕಾಧ್ಯಕ್ಷರನ್ನು ಪುತ್ಥಳಿ ಸ್ಥಾಪನೆ ಮೂಲಕ ಗೌರವಿಸಿದೆ. ಎಲ್ಲಾ ಕೃಷಿಕರು ಅಭಿಮಾನ ಪಡಬೇಕಾದ ವಿಚಾರ. ಸಹಕಾರಿ ಕ್ಷೇತ್ರಕ್ಕೆ ಸಂದ ಮಾನ. ಕೃಷಿ ಕ್ಷೇತ್ರಕ್ಕೆ ಸಂಮಾನ. “ಪುತ್ಥಳಿ ಸ್ಥಾಪನೆಯು ಬಹುಕಾಲದ ಕನಸು. ಅದು ನನಸಾಗಿದೆ. ಕ್ಯಾಂಪ್ಕೊ ಸಂಸ್ಥೆಯನ್ನು ಅವರು ಬೆವರಿನ ಬಲದಿಂದ ಕಟ್ಟಿದ್ದಾರೆ’ ಎಂದು ಜ್ಞಾಪಿಸಿಕೊಳ್ಳುತ್ತಾರೆ ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ. 

Advertisement

ಸಂಸ್ಮರಣೆ, ಪುತ್ಥಳಿ, ಸಾಕ್ಷ್ಯ ಚಿತ್ರ ಇವೆಲ್ಲಾ ಹಿರಿಯರನ್ನು ನೆನಪಿ ಸುವ ಉಪಾಧಿಗಳು. ಒಂದು ಕಾಲಘಟ್ಟದಲ್ಲಿ ಅವರೊಂದಿಗೆ ದುಡಿದ, ಸ್ಪಂದಿಸಿದ ಮನಸ್ಸುಗಳಿಗೆ ಸಾಧನೆಗಳು ತಿಳಿದಿರುತ್ತದೆ. ತಲೆಮಾರು ಬದಲಾದಾಗ ಸಹಜವಾಗಿ ಹಿಂದಿನದು ಇತಿಹಾಸ ವಾಗು ತ್ತದೆ. ಈ ಇತಿಹಾಸದ ಸ್ಪಷ್ಟನೆಗೆ ಇಂತಹ ಉಪಾಧಿಗಳು ಸಹಕಾರಿ. ತಲೆಮಾರಿನಿಂದ ತಲೆಮಾರಿಗೆ ಇತಿಹಾಸವನ್ನು ದಾಟಿ ಸುವ ಕೆಲಸಗಳನ್ನಿವು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ವಾರಣಾಶಿ ಯವರ ಪುತ್ಥಳಿಯ ಹಿಂದೆ ಅಧ್ಯಯನಕ್ಕೆ ಬೇಕಾದ ಸರಕುಗಳಿವೆ. 

ಸುಬ್ರಾಯ ಭಟ್ಟರು ಕ್ಯಾಂಪ್ಕೊ ಬ್ರಹ್ಮ. 1970ರ ದಶಕದ ಸ್ಥಿತಿಯ ನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಅಡಿಕೆ ಮಾರುಕಟ್ಟೆಯ ಹಾವೇಣಿ ಯಾಟ, ವರ್ತಕರ ಕಣ್ಣುಮುಚ್ಚಾಲೆ, ಮಧ್ಯವರ್ತಿಗಳ ಚಾಲಾಕಿ
ತನ, ಸರಕಾರದ ನೀತಿ, ಅಡಿಕೆಯ ಅತಿ ಉತ್ಪಾದನೆ. ಪರಿಣಾಮ, ಅಡಿಕೆ ಬೆಲೆ ಕುಸಿತ. ಕೃಷಿ ಬದುಕು ಡೋಲಾಯಮಾನ. ಇಂತಹ ಹೊತ್ತಲ್ಲಿ 1973ರಲ್ಲಿ ಕನಸಿನ ಸಂಸ್ಥೆಯ ಸ್ಥಾಪನೆ.

ಉದ್ಘಾಟನೆಯಂದೇ ಮಾರುಕಟ್ಟೆಗೆ ಜಿಗಿತ. ವರ್ತಕರು ಒಂದೊಂದು ರೂಪಾಯಿ ಏರಿಸಿದಾಗಲೂ ಕ್ಯಾಂಪ್ಕೊ ಎದೆಯೊ ಡ್ಡಿತು. ಕುಸಿತ ಕಂಡಾಗ ಕೃಷಿಕರಿಗೆ ತೊಂದರೆಯಾಗದಂತೆ ನೋಡಿಕೊಂಡಿತು. ಕೃಷಿಕರ ವಿಶ್ವಾಸ ಗಳಿಸುತ್ತಾ ಬೆಳೆದ‌ ಕ್ಯಾಂಪ್ಕೊ ಈಗ ದೇಶ ವಿಖ್ಯಾತ. ಅಡಿಕೆ ಬೆಳೆಗಾರರ ಆಪದಾºಂಧವ. 

ಪ್ರಚಾರ, ಕ್ರೆಡಿಟ್‌ಗಳ ಪರಿವೆಯೇ ಇಲ್ಲದೆ ಬದ್ಧತೆಯಿಂದ ತನ್ನ ಪಾಡಿಗೆ ಸಾಧನೆ ಮಾಡುತ್ತಾ ಹೋದರು. ಇಂತಹ ಅತ್ಯಪೂರ್ವ ಗುಣಕ್ಕೆ ಇವರಂತಹ ಉದಾಹರಣೆಗಳು ದೇಶದಲ್ಲೇ ಹೆಚ್ಚು ಇರಲಾರದು. 

ಶಿಕ್ಷಣ ತಜ್ಞ ಸಿ.ಹೆಚ್‌.ಕೃಷ್ಣಶಾಸ್ತ್ರಿ ಇವರು ಹೇಳುತ್ತಿದ್ದ ಒಂದು ಘಟನೆಯು ವಾರಣಾಶಿಯವರ ಕೃಷಿಕಪರ ಬದ್ಧತೆಗೆ ಮಾದರಿ. ಸುಬ್ರಾಯ ಭಟ್‌ ಕ್ಯಾಂಪ್ಕೊ ಅಧ್ಯಕ್ಷರಾದ ಸಮಯದಲ್ಲಿ 
ಅವರಿಗೆ ಸಮ್ಮಾನದ ಪ್ರಸ್ತಾವದೊಂದಿಗೆ ಹೋಗಿದ್ದರು. ಎಷ್ಟು ಖರ್ಚು ಬರಬಹುದು? ಭಟ್ಟರ ಪ್ರಶ್ನೆ. ಸುಮಾರು ಹದಿನೈದು ಸಾವಿರ ಎಂದಿದ್ದರು. ನೀವೊಂದು ಕೆಲಸ ಮಾಡಿ. ಅಷ್ಟು ಮೊತ್ತದ ಕ್ಯಾಂಪ್ಕೊ ಶೇರು ಖರೀದಿಸಿ. ಆ ಮೂಲಕ ಸಂಸ್ಥೆ ಬೆಳೆಸಿ. ಇದೇ ನನಗೆ ಗೌರವ ಎಂದರು!  ಬೃಹತ್‌ ಅಡಿಕೆ ಖರೀದಿಗೆ ಹೊರಟಾಗ ಕ್ಯಾಂಪ್ಕೊದಲ್ಲಿ ಬೇಕಾ ದಷ್ಟು ಹಣವಿರಲಿಲ್ಲ. ಸುಬ್ರಾಯ ಭಟ್‌ ಅಲ್ಲಿಂದಿಲ್ಲಿಂದ ಹೊಂದಾ ಣಿಕೆ ಮಾಡಿದರು. ಅಡಿಕೆ ಹಾಕಿದ ಕೃಷಿಕರನ್ನು ನಾಳೆ ಬಾ ಎನ್ನುವುದು ಇವರ ಜಾಯಮಾನವಲ್ಲ. ಸಂಪನ್ಮೂಲಕ್ಕಾಗಿ ಬ್ಯಾಂಕುಗಳ ಸಂಪರ್ಕ. “ತುರ್ತಾಗಿ ಒಂದು ಕೋಟಿ ರೂಪಾಯಿ ಬೇಕಿತ್ತು. ಭಟ್ಟರು ಸಿಂಡಿಕೇಟ್‌ ಬ್ಯಾಂಕಿನ ಕೆ.ಕೆ.ಪೈ ಅವರನ್ನು ಭೇಟಿಯಾಗಿ ದ್ದರು. ಕೋಟಿ ರೂಪಾಯಿ ಅಂದಾಗ ಪೈಗಳ ಮನಸ್ಸು ಹಿಂದೇಟು ಹಾಕಿತ್ತು’, ಕ್ಯಾಂಪ್ಕೊದ ಮಾಜಿ ಅಧ್ಯಕ್ಷ ಕೆ. ರಾಮ ಭಟ್‌ ಉರಿಮಜಲು ಜ್ಞಾಪಿಸಿಕೊಳ್ಳುತ್ತಾರೆ, “ನೀವು ಹಣ ಕೊಡದಿದ್ದರೆ ಸಂಸ್ಥೆಯನ್ನು ಮುಚ್ಚುತ್ತೇವೆೆ ಎಂದ ಭಟ್ಟರ ಸವಾಲಿನ ಮುಂದೆ ಪೈಗಳಿಗೆ ಇಲ್ಲ ಎನ್ನಲಾಗಲಿಲ್ಲ. ನಾಳೆ ಎಂಟು ಗಂಟೆಗೆ ಬನ್ನಿ. ಹಣ ರೆಡಿಯಾಗಿರುತ್ತದೆ ಎಂದಿದ್ದರು.’

ಹಣಕಾಸಿನ ವಿಚಾರದಲ್ಲಿ ಭಟ್ಟರು ಸದಾ ಎಚ್ಚರ. ವೆಚ್ಚದಲ್ಲಿ ಕಟ್ಟುನಿಟ್ಟಿನ ಹಿಡಿತ. ಮನೆಯಿಂದ ಕಚೇರಿಗೆ ಬರಲು ಸ್ವಂತ ಕಾರಿನ ಬಳಕೆ. ಇದು ಸಂಸ್ಥೆಯ ಕೆಲಸಕ್ಕೆ ಮಾತ್ರ ಬಳಕೆ. ಅಧ್ಯಕ್ಷರಿಗೆಂದು ಹವಾ ನಿಯಂತ್ರಿತ ಕಾರಾಗಲಿ, ಲಕ್ಸುರಿ ವಾಹನವಾಗಲಿ ಇರಲಿಲ್ಲ. ಆಗಿನ ಆಡಳಿತ ನಿರ್ದೇಶಕ ಎ.ಎ. ದೇಸಾಯಿ, ಭಟ್ಟರ ಶ್ರಮವನ್ನು ಕಂಡ‌ದ್ದು ಹೀಗೆ: “ಅವರ ಕೆಲಸ ಕಾಗದ ಪೆನ್ನುಗಳಿಗೆ ಸೀಮಿತವಲ್ಲ. ಬೆಳಗಿನ ಎಂಟು ಗಂಟೆಗೆ ಪ್ರತ್ಯಕ್ಷರಾದರೆ ರಾತ್ರಿ ಹತ್ತರವರೆಗೂ ಕಚೇರಿಯಲ್ಲಿ ಕಾರ್ಯಮಗ್ನರಾಗಿರುತ್ತಿದ್ದರು. ವಾರದಲ್ಲಿ ಇಂಥ ದಿನಗಳೇ ಹೆಚ್ಚು. ಬ್ಯಾಂಕುಗಳ ಜತೆ ವ್ಯವಹರಿಸುವಲಿ, ಸರಕಾರಗಳನ್ನು ಸಂಪರ್ಕಿಸುವಲ್ಲಿ, ಸ್ವತಃ ಹಾಜರ್‌. ಶಾಖೆಗಳ ಪರಿಶೀಲನೆ, ಗೋದಾಮುಗಳ ವೀಕ್ಷಣೆ, ಸಮಸ್ಯೆಗಳ ಪರಿಹಾರ ಅನ್ವೇಷಣೆ ಎಲ್ಲದರಲ್ಲಿಯೂ ಮುಂದಾಳು.’
“ವಾರಣಾಶಿಯವರು ಲೆಕ್ಕದಲ್ಲಿ ಪಕ್ಕಾ. ಎಲ್ಲವೂ ಬೆರಳ ತುದಿಯಲ್ಲಿ. ಪೈಸೆಯಿಂದ ಕೋಟಿಯವರೆಗೆ ಅವರ ಸಿಕ್ಸ್ತ್ ಸೆನ್ಸ್‌ ಸದಾ ಜಾಗೃತ’ ಎನ್ನುತ್ತಾರೆ ಕ್ಯಾಂಪ್ಕೊದ ನಿವೃತ್ತ ಡಿಜಿಎಂ (ಲೆಕ್ಕ) ಕೆದುಂಬಾಡಿ ಗಣಪತಿ ಭಟ್‌. “ಚಾಕೊಲೇಟ್‌ ಫ್ಯಾಕ್ಟರಿ ಶುರು ಮಾಡುವ ಸಂದರ್ಭ. ಮಾರುಕಟ್ಟೆಯ ಬಗ್ಗೆ ಚರ್ಚೆಯಾಗುತ್ತಿತ್ತು. ದರ ನಿಗದಿ ಮಾಡುವಾಗ ಒಂದು ಎಕ್ಲೇರ್‌ ಚಾಕೊಲೇಟಿಗೆ ಅರ್ಧ ಪೈಸೆ ವ್ಯತ್ಯಾಸವಾಗಿತ್ತು. ತಕ್ಷಣ ಸುಬ್ರಾಯ ಭಟ್‌ “ಅರ್ಧ ಪೈಸೆ ಎನ್ನುವ ತಾತ್ಸಾರ‌ ಕೂಡದು. ಒಂದು ಲೋಡು ಚಾಕೋಲೇಟಿನಲ್ಲಿ ನಷ್ಟ ಎಷ್ಟಾಯಿತು, ಲೆಕ್ಕ ಹಾಕಿದ್ದೀರಾ? ಹತ್ತು ಸಾವಿರ ರೂಪಾಯಿ ಖೋತಾ’ ಎಂದಾಗ ಎಲ್ಲರೂ ಬೆಚ್ಚಿಬಿದ್ದರು. ಲೆಕ್ಕದಲ್ಲಿ ಹತ್ತು ರೂಪಾಯಿ ವ್ಯತ್ಯಾಸವಾದರೂ ಅವರು ಸಹಿಸುತ್ತಿರಲಿಲ್ಲ. ಒಮ್ಮೆ ಲೆಕ್ಕ ಬರೆಯುವಾಗ ಹತ್ತು ರೂಪಾಯಿ ತಪ್ಪಿದ್ದಕ್ಕೆ ಒಬ್ಬರು ಸಿಬ್ಬಂದಿಯನ್ನು ವಜಾ ಮಾಡಿದ್ದರು. ಪ್ರಾಮಾಣಿಕತೆಯ ಬಗೆಗಿನ ಈ ನಿಷ್ಠುರ ನಿಲುವು ಇದು. 

ಅಡಿಕೆಯೊಂದಿಗೆ ಕೊಕ್ಕೋ ಬೆಳೆಸಿ ಅಡಿಗಡಿಗೆ ಅವರು ಕೊಡು ತ್ತಿದ್ದ ಸಲಹೆ. ಕೊಕ್ಕೋ ಬೆಳೆಸಲು ಪ್ರೋತ್ಸಾಹಿಸಿದ ಚಾಕೋಲೇಟ್‌ ಕಂಪೆನಿಯೊಂದು ಎಂಬತ್ತರ ದಶಕದಾರಂಭದಲ್ಲಿ ಅನಾಮತ್ತಾಗಿ ರೈತರಿಂದ ಕೊಕ್ಕೋ ಖರೀದಿ ನಿಲ್ಲಿಸಿತು. ಕೊಕ್ಕೋ ಕೊಳ್ಳುವವರೇ ಇಲ್ಲದಾಯಿತು. ಈ ಸಂಕಟ ಸುಬ್ರಾಯ ಭಟ್‌ ಅಂತರಾತ್ಮವನ್ನು ಕೆಣಕಿತು. ಮತ್ತೆ ಅವರು ಸವಾಲನ್ನೆದುರಿಸಲು ಸಜ್ಜಾದರು. ಇವರ ದಿಟ್ಟ ನಿರ್ಧಾರದಿಂದಾಗಿ ಕೆಲವೇ ದಿನಗಳಲ್ಲಿ ಕ್ಯಾಂಪ್ಕೊ ಕೊಕ್ಕೋ ಖರೀದಿ ಆರಂಭಿಸಿತು. ಉತ್ತಮ ನೆಲೆ ಕಂಡಿತು. ಕೊಕ್ಕೋ ಬೀಜ ರಫ್ತು ಮಾಡುವಷ್ಟರ ಮಟ್ಟಿಗೆ ಸದೃಢವಾಯಿತು. 1986ರಲ್ಲಿ ಹದಿಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ತೂರಿನಲ್ಲಿ ಆರಂಭವಾದ ಚಾಕೊಲೇಟು ಕಾರ್ಖಾನೆ ಆ ಕಾಲಕ್ಕೆ ಏಷ್ಯಾದಲ್ಲೇ ಅತಿ ದೊಡ್ಡದು. 

ಸಹಕಾರಿ ಸಂಸ್ಥೆಗಳು ಹೇಗಿರಬೇಕು ಎನ್ನುವುದಕ್ಕೆ ಭಟ್ಟರ ಪಂಚ ಸೂತ್ರಗಳು. ಸದಾ ಜಾಗರೂಕ‌ ಸದಸ್ಯರು, ಪ್ರಾಮಾಣಿಕ ಮತ್ತು ದಕ್ಷ ಆಡಳಿತ ಮಂಡಳಿ, ಕರ್ತವ್ಯನಿಷ್ಠ ಸಿಬ್ಬಂದಿ, ಮಿತಿಯ ರಿತ ಸರಕಾರ ಮತ್ತು ರಾಜಕೀಯ ರಾಹಿತ್ಯ. ಈ ಸೂತ್ರಗಳೇ ಕ್ಯಾಂಪ್ಕೊದಂತಹ ದೊಡ್ಡ ಸಂಸ್ಥೆಯ ಅಡಿಗಟ್ಟು. ಈ ಅಡಿಗಟ್ಟಿನ ಮೇಲೆ ವಾರಣಾಶಿಯವರ ಪುತ್ಥಳಿ ಸ್ಥಾಪನೆ ಅರ್ಥಪೂರ್ಣ. ಆ ಚೇತನಕ್ಕೆ ನೀಡಿದ ಗೌರವ.

ನಾ. ಕಾರಂತ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next