Advertisement

ಶಿಲ್ಪ ಬಜಾರ್‌: ಸ್ಥಳೀಯರಿಗಿಲ್ಲ ಆದ್ಯತೆ

11:51 AM Feb 06, 2017 | |

ಬೆಂಗಳೂರು: ರಾಜ್ಯದ ಕುಶಲಕರ್ಮಿಗಳಿಗೆ ಪ್ರೋತ್ಸಾಹ ಹಾಗೂ  ಕರಕುಶಲ ವಸ್ತುಗಳಿಗೆ ನೇರ ಮಾರುಕಟ್ಟೆ ಒದಗಿಸಲು ಪ್ರಾಮುಖ್ಯತೆ ನೀಡಬೇಕಿದ್ದ “ಗಾಂಧಿ ಶಿಲ್ಪ ಬಜಾರ್‌’ನಲ್ಲಿ ರಾಜ್ಯದ ಕುಶಲಕರ್ಮಿಗಳಿಗೆ ಜಾಗ ಇಲ್ಲದಂತಾಗಿದೆ. ಫೆ.1ರಿಂದ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭಗೊಂಡಿದ್ದು, 10 ದಿನಗಳ ಕಾಲ ನಡೆಯಲಿದೆ. ಆದರೆ, ಇಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿರ್ಮಿಸಿರುವ 100 ಮಳಿಗೆಗಳಲ್ಲಿ 90ಕ್ಕೂ ಹೆಚ್ಚು ಮಳಿಗೆಗಳನ್ನು ಹೊರ ರಾಜ್ಯದವರ ಪಾಲಾಗಿದೆ.  

Advertisement

ಸಿಕ್ಕಿದ್ದೂ ಹತ್ತಕ್ಕಿಂತ ಕಡಿಮೆ ಮಳಿಗೆ: ರಾಜ್ಯದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ನೋಂದಣಿಯಾಗಿರುವ ಸರಿಸುಮಾರು 3 ಸಾವಿರಕ್ಕೂ ಅಧಿಕ  ಕುಶಲಕರ್ಮಿಗಳು ಇದ್ದಾರೆ. ಶಿವಮೊಗ್ಗ, ಶಿರಸಿ, ಕುಮಟ ಸುತ್ತಮುತ್ತಲ ಪ್ರದೇಶದಲ್ಲಿ 400 ಮಂದಿ, ಗೊಂಬೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಚನ್ನಪಟ್ಟಣದಲ್ಲಿ 400, ರಾಮನಗರದ 100ಕುಂಬಾರರು, ಕಾಪೆಟ್‌ಗೆ ಹೆಸರುವಾಸಿಯಾಗಿರುವ ನವಲಗುಂದದಲ್ಲಿ 200, ಕಿನ್ನಾಳ ಆಟಿಕೆಗಳ ತವರೂರು ಕೊಪ್ಪಳದಲ್ಲಿ 40 ಕುಟುಂಬ, ಬಿದರಿಕಲೆಯ ನೆಲೆವೀಡು ಬೀದರಿನಲ್ಲಿ 300ರಿಂದ 400, ಮೈಸೂರು, ದೊಡ್ಡಬಿದರಿಕಲ್ಲು ಹೀಗೆ ರಾಜ್ಯದ ವಿವಿಧೆಡೆಯಲ್ಲಿ ಸಾವಿರಾರು ಮಂದಿ ಕುಶಲಕರ್ಮಿಗಳು ಇದ್ದಾರೆ. ಆದರೆ ಇವರಿಗೆ “ಗಾಂಧಿ ಶಿಲ್ಪ ಬಜಾರ್‌’ನಲ್ಲಿ ಕನಿಷ್ಠ 10 ಮಳಿಗೆಗಳನ್ನು ತೆರೆಯಲು ಕೂಡ ಅವಕಾಶ ನೀಡಿಲ್ಲ. 

ಹೊರ ರಾಜ್ಯದವರಿಗೆ ಆದ್ಯತೆ: ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಲಕ್ನೋ, ದೆಹಲಿ, ರಾಜಸ್ಥಾನ, ಕಾಶ್ಮೀರ, ಕೇರಳ, ಅಸ್ಸಾಂ ಹೀಗೆ ಬೇರೆ ರಾಜ್ಯಗಳಿಂದ ಬಂದಿರುವವರಿಗೆ ಮಳಿಗೆಗಳನ್ನು ನೀಡಲಾಗಿದೆ. ಶ್ರೀಗಂಧ, ಬೀಟೆ ಮರದ ಮೂರ್ತಿಗಳ ವಸ್ತುಗಳು, ಚನ್ನಪಟ್ಟಣದ ಗೊಂಬೆಗಳು, ಕಿನ್ನಾಳ ಕಲೆ, ಬಿದರಿಕಲೆ, ಕಾಪೆìಟ್‌ಗಳು, ಬಾಳೆನಾರಿನ ಕೈಚೀಲಗಳು ಇತ್ಯಾದಿ ಕುಸರಿ ವಸ್ತುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಆದರೆ ಸೂಕ್ತ ಮಾರುಕಟ್ಟೆ ಸಿಕ್ಕಿಲ್ಲ.

ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಕುಶಲಕರ್ಮಿಗಳು ಈ ಕಲೆಯಿಂದ ದೂರವಾಗುತ್ತಿದ್ದು, ಕಲೆ ಅವಸಾನದೆಡೆಗೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕುಶಲಕಲೆ ಅಭಿವೃದ್ಧಿಗೆಂದೇ ಸ್ಥಾಪನೆಗೊಂಡ ನಿಗಮಗಳು ಸ್ಥಳೀಯ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡದೆ ಹೊರರಾಜ್ಯಗಳ ವ್ಯಾಪಾರಿಗಳಿಗೆ ಮಣೆ ಹಾಕುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಳಿಗೆಗಳ ಮಾರಾಟ?: ಕರಕುಶಲ ವಸ್ತುಗಳ ನೇರ ಮಾರಾಟ ಉದ್ದೇಶಕ್ಕೆ ಇಂತಹ ಮೇಳ ಆಯೋಜಿಸಲೆಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಕೇಂದ್ರ ಜವಳಿ ಮಂತ್ರಾಲಯ ಸುಮಾರು 20 ಲಕ್ಷ ರೂ.ಗಳನ್ನು ನೀಡಿದೆ. 10 ದಿನಗಳ ಗಾಂಧಿಶಿಲ್ಪ ಬಜಾರ್‌ಗೆಂದು ಸ್ಥಳ ನೀಡಿದ್ದಕ್ಕಾಗಿ ಚಿತ್ರಕಲಾ ಪರಿಷತ್ತಿಗೆ 6 ಲಕ್ಷ ನೆಲ ಬಾಡಿಗೆ, 100 ಮಳಿಗೆಗಳಿಗೆ ಮೂಲಸೌಕರ್ಯ ಒದಗಿಸಲು ಫ್ಯಾಬ್ರಿಕಾನ್‌ ಎಂಬ ಸಂಸ್ಥೆಗೆ 6 ಲಕ್ಷ ರೂ. ಟೆಂಡರ್‌ ನೀಡಲಾಗಿದೆ.

Advertisement

ಸ್ಥಳೀಯರಿಗೆ ಹತ್ತು ದಿನಗಳವರೆಗೆ ಉಚಿತವಾಗಿಯೇ ಮಳಿಗೆಗಳನ್ನು ಕೊಡಲು ಅವಕಾಶವಿದ್ದು, ಅಧಿಕಾರಿಗಳು ಅವುಗಳನ್ನು ಹೊರಗಿನವರಿಗೆ ಶುಲ್ಕ ಪಡೆದು ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿಂದೆ “ಗಾಂಧಿ ಶಿಲ್ಪ ಬಜಾರ್‌’ನ್ನು ಮಂಗಳೂರು ಮತ್ತು ಮೈಸೂರಿನಲ್ಲೂ ಆಯೋಜಿಸಲಾಗಿತ್ತು. ಅಲ್ಲೂ ಕೂಡ ಬೆಂಗಳೂರಿನ ಮೇಳದಲ್ಲಿ ಇದ್ದಂತಹ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಯಾರಿಗೆ ಮಳಿಗೆ ನೀಡಬೇಕು ಎಂಬುದನ್ನು ಕೇಂದ್ರದ ಜವಳಿ ಮಂತ್ರಾಲಯದ ಹ್ಯಾಂಡಿಕ್ರಾಫ್ಟ್ ಅಭಿವೃದ್ಧಿ ಆಯುಕ್ತರೇ ತೀರ್ಮಾನಿಸುತ್ತಾರೆ. ಗಾಂಧಿ ಶಿಲ್ಪ ಬಜಾರ್‌ನಲ್ಲಿ ರಾಷ್ಟ್ರದ ಎಲ್ಲ ರಾಜ್ಯದ ಕುಶಲಕರ್ಮಿಗಳಿಗೆ ಅವಕಾಶ ನೀಡಲಾಗಿದೆ. ರಾಜ್ಯದ ಕೆಲವು ಕುಶಲಕರ್ಮಿಗಳಿಗೆ ಮಳಿಗೆ ಸ್ಥಾಪನೆಗೆ ಆಹ್ವಾನ ನೀಡಿದ್ದೆವು. ಅವರು ಬಂದಿಲ್ಲ.
-ಪರಶುರಾಮ್‌, ನೋಡಲ್‌ ಅಧಿಕಾರಿ, ಕಾವೇರಿ ಹ್ಯಾಂಡಿಕ್ರಾಫ್ಟ್

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next