ಹೊಸದಿಲ್ಲಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಯನ್ನು ತಕ್ಷಣ ಬಂಧಿಸುವುದನ್ನು ತಡೆಯುವ ಸಂಬಂಧ ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶವನ್ನು ಬದಿಗೆ ತಳ್ಳಲು ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸುವ ಸಾಧ್ಯತೆಯಿದೆ. ಅಲ್ಲದೆ ಮೊದಲಿನ ಸ್ಥಿತಿಯನ್ನೇ ಕಾಯ್ದುಕೊಳ್ಳಲು ಇತರ ಸಾಧ್ಯತೆಗಳ ಬಗ್ಗೆಯೂ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಜುಲೈನಲ್ಲಿ ಆರಂಭವಾಗುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗೆ ತಿದ್ದುಪಡಿ ತಂದು ಮಂಡಿಸುವ ಆಯ್ಕೆಯೂ ಸರಕಾರದ ಪರಿಗಣನೆಯಲ್ಲಿದೆ ಎಂದು ಹೇಳಲಾಗಿದೆ.
ಒಂದು ವೇಳೆ ಈಗ ಅಧ್ಯಾದೇಶ ಹೊರಡಿಸಿದರೂ, ಅದನ್ನು ಮಸೂದೆಯನ್ನಾಗಿ ಪರಿವರ್ತಿಸಿ ಸಂಸತ್ತಿನಲ್ಲಿ ಮಂಡಿಸಬೇಕಾಗುತ್ತದೆ. ಸುಗ್ರೀವಾಜ್ಞೆ ಹೊರಡಿಸುವುದು ಮತ್ತು ನಂತರ ಮಸೂದೆ ಮಂಡಿಸುವ ಎರಡು ಪುನರಾವರ್ತಿತ ಕೆಲಸ ಮಾಡಬೇಕಾಗುತ್ತದೆ. ಆದರೆ ಸುಗ್ರೀವಾಜ್ಞೆಯಿಂದ ತಕ್ಷಣದ ಫಲಿತಾಂಶ ಲಭ್ಯ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಹೆಚ್ಚಿನ ಅಧಿಕಾರಿಗಳು ಸದ್ಯ ಅಧ್ಯಾದೇಶವನ್ನು ಹೊರಡಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ದೇಶಾದ್ಯಂತ ದಲಿತರಲ್ಲಿ ಭುಗಿಲೆದ್ದಿರುವ ಆಕ್ರೋಶ ತಣ್ಣಗಾಗಲಿದೆ.
ಮಾರ್ಚ್ 20ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿರೋಧಿಸಿ, ಕಳೆದ ವಾರ ದಲಿತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದವು. ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ವಿಪಕ್ಷಗಳೂ ದೂರಿದ್ದವು. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ ತಡೆಯುವ ಕಾನೂನು ಶಿಥಿಲಗೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ. ಆದರೆ ಈ ಸಂಬಂಧ ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ಸಲ್ಲಿಸಿರುವ ಮರುಪರಿಶೀಲನೆ ಅರ್ಜಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಲು ಯೋಚಿಸಲಾಗಿದೆ.
– ಸುಪ್ರೀಂ ಆದೇಶ ಬದಿಗೆ ಸರಿಸಲು ಆಯ್ಕೆಗಳ ಹುಡುಕಾಟದಲ್ಲಿ ಸರಕಾರ
– ಎಸ್‌ಸಿ, ಎಸ್‌ಟಿ ಕಾಯ್ದೆಗೆ ತಿದ್ದುಪಡಿ ತಂದು, ಮಸೂದೆ ಮಂಡಿಸಲು ಚಿಂತನೆ ಸಂಸತ್ ನ ಮುಂಗಾರು ಅಧಿವೇಶನದಲ್ಲೇ ಈ ಮಸೂದೆ ಮಂಡನೆ ಸಾಧ್ಯತೆ