ಅಮೇಠಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಠಿಯಿಂದ ಸಲ್ಲಿಸಿರುವ ನಾಮಪತ್ರದ ಪರಿಶೀಲನೆಯನ್ನು ನಿರ್ವಚನಾಧಿಕಾರಿ ರಾಮಮನೋಹರ್ ಮಿಶ್ರ ಅವರು ಎ.22ಕ್ಕೆ ಮುಂದೂಡಿದ್ದಾರೆ.
ರಾಹುಲ್ ಗಾಂಧಿ ಅವರ ನಾಮಪತ್ರಕ್ಕೆ ಪಕ್ಷೇತರ ಅಭ್ಯರ್ಥಿ ಧ್ರುವ ಲಾಲ್ ಅವರು ಮೂರು ಅಂಶಗಳ ಆಕ್ಷೇಪ ಎತ್ತಿರುವ ಕಾರಣ, ನಾಮಪತ್ರ ಪರಿಶೀಲನೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.
ಬ್ರಿಟನ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಕಂಪೆನಿಯೊಂದರ ಸರ್ಟಿಫಿಕೇಟ್ ಆಫ್ ಇನ್‌ಕಾರ್ಪೊರೇಶನ್ ಆಧಾರದಲ್ಲಿ ರಾಹುಲ್ ಗಾಂಧಿ ತಾನು ಬ್ರಿಟನ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ. ಆದುದರಿಂದ ಈ ದೇಶದ ಪ್ರಜೆ ಅಲ್ಲದವರು ಇಲ್ಲಿನ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಲಾಲ್ ಅವರ ವಕೀಲ ರವಿ ಪ್ರಕಾಶ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಯಾವ ನೆಲೆಯಲ್ಲಿ ಬ್ರಿಟಿಷ್ ಪ್ರಜೆಯಾಗಿದ್ದಾರೆ ? ಆ ವಿಷಯ ಸ್ಪಷ್ಟವಾಗುವ ತನಕ ರಾಹುಲ್ ಗಾಂಧಿ ಅವರ ನಾಮಪತ್ರವನ್ನು ಸ್ವೀಕರಿಸಬಾರದೆಂದು ನಾವು ನಿರ್ವಚನಾಧಿಕಾರಿಯನ್ನು ಕೋರಿದ್ದೇವೆ ಎಂದು ವಕೀಲ ರವಿ ಪ್ರಕಾಶ್ ಹೇಳಿದರು.
ರಾಹುಲ್ ಗಾಂಧಿ ಸಲ್ಲಿಸಿರುವ ಅಫಿದಾವಿತ್ ನಲ್ಲಿ ಬ್ರಿಟನ್ ಕಂಪೆನಿಯ ಆಸ್ತಿಪಾಸ್ತಿಯ ವಿವರಗಳಿಲ್ಲ; ಆತನ ಶೈಕ್ಷಣಿಕ ಅರ್ಹತೆಯ ಬಗ್ಗೆ ಹಲವಾರು ತಪ್ಪುಗಳಿವೆ. ಅವರು ಶೈಕ್ಷಣಿಕ ಸರ್ಟಿಫಿಕೇಟ್‌ಗಳ ಮೂಲ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ; ಆಗ ಮಾತ್ರವೇ ಅವರು ಅಫಿದಾವಿತ್ ನಲ್ಲಿ ಘೋಷಿಸಿಕೊಂಡಿರುವುದು ಸಾಬೀತಾಗುತ್ತದೆ ಎಂದು ಪ್ರಕಾಶ್ ಹೇಳಿದರು.
ರಾಹುಲ್ ಗಾಂಧಿ ತಾನು ಕಲಿತ ಕಾಲೇಜಿನಲ್ಲಿ ರಾವುಲ್ ವಿನ್ಸಿ ಎಂಬ ಹೆಸರನ್ನು ಬಳಸಿಕೊಂಡಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಹೆಸರಿನಲ್ಲಿ ಯಾವುದೇ ಸರ್ಟಿಫಿಕೇಟ್‌ಗಳು ಇಲ್ಲ ಎಂದು ಪ್ರಕಾಶ್ ಹೇಳಿದರು.
ರಾಹುಲ್ ಗಾಂಧಿ ಮತ್ತು ರಾವುಲ್ ವಿನ್ಸಿ ಒಬ್ಬನೇ ವ್ಯಕ್ತಿಯೇ ? ಅಲ್ಲದಿದ್ದರೆ ರಾಹುಲ್ ಗಾಂಧಿ ತಮ್ಮ ಒರಿಜಿನಲ್ ಸರ್ಟಿಫಿಕೇಟ್‌ಗಳನ್ನು ನೀಡಬೇಕೆಂದು ನಾವು ಆಗ್ರಹಿಸುತ್ತೇವೆ.ಆಗ ಅವುಗಳನ್ನು ಪರಿಶೀಲಿಸಬಹುದಾಗಿರುತ್ತದೆ ಎಂದವರು ಹೇಳಿದರು.
ಗಾಂಧಿ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ಅಮೇಠಿಯಲ್ಲಿ ಮೇ 6ರಂದು ಚುನಾವಣೆ ನಡೆಯಲಿದೆ. ಇಲ್ಲಿ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರಿಂದ ಪ್ರಬಲ ಸವಾಲು ಎದುರಾಗಿದೆ.