Advertisement

ಪಡಿತರ ಬದಲು ನಗದು ಯೋಜನೆಯಿಂದ ಅನ್ನಕ್ಕೆ ಕತ್ತರಿ

12:23 PM Aug 08, 2017 | |

ಎಚ್‌.ಡಿ.ಕೋಟೆ: ಮುಂದಿನ ದಿನಗಳಲ್ಲಿ ದೇಶದಲ್ಲಿ ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಕಡಿತ ಹಾಗೂ ಪಡಿತರ ವಿತರಣೆ ಬದಲು ಖಾತೆಗೆ ನಗದು ಜಮಾ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ತಾಲೂಕು ಘಟಕದಿಂದ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಪ್ರತಿಭಟನಾ ಧರಣಿ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈ ವೇಳೆ  ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. 

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಕಾರರು, ಕೇಂದ್ರ ಸರ್ಕಾರ ಸಿಲಿಂಡರ್‌ ಸಬ್ಸಿಡಿಯನ್ನು ರದ್ದು ಮಾಡಲು ಮುಂದಾಗಿರುವುದು ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ರೈತರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಬಿಪಿಎಲ್‌ ಪಡಿತರದಾರರಿಗೆ ನೀಡುವ ಧಾನ್ಯದ ಬದಲು ಅವರ ಖಾತೆಗೆ ನೇರ ಹಣ ಜಮಾ ಮಾಡಲು ಹೊರಟಿರುವುದು ಖಂಡನೀಯ. ಬಡವರು ತಿನ್ನುವ ಅನ್ನಕ್ಕೂ ಕತ್ತರಿ ಹಾಕಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಸಬ್‌ಕಾ-ಸಾತ್‌, ಸಬ್‌ಕಾ ವಿಕಾಸ್‌ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದರು. ದೇಶದಲ್ಲಿ ಕೋಟಿಗಟ್ಟಲೇ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಮೇಕ್‌-ಇನ್‌-ಇಂಡಿಯಾ, ಡಿಜಿಟಲ್‌ ಇಂಡಿಯಾ ಮಾಡುತ್ತೇವೆ ಎಂದು ಜನರಿಗೆ ಪೊಳ್ಳು ಭರವಸೆ ನೀಡಿದ್ದಾರೆ. ಶ್ರೀಮಂತರನ್ನು ರಕ್ಷಿಸುವ ನಿಟ್ಟಿನಲ್ಲಿ ದೇಶದಲ್ಲಿ ನೋಟ್‌ ಬ್ಯಾನ್‌ ಮಾಡಲಾಗಿದೆ. ಈ ಮೂಲಕ ಶ್ರೀಮಂತರನ್ನು ಕಾರ್ಪೊàರೇಟ್‌ ವಲಯದವರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಡಿಸಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಭೀಮನಹಳ್ಳಿ ಸೋಮೇಶ್‌ ಮಾತನಾಡಿ, ದೇಶದಲ್ಲಿ 52 ಕೋಟಿ ಬಡ ಜನರಿದ್ದಾರೆ. 33 ಕೋಟಿ ವಿದ್ಯಾವಂತ ನಿರುದ್ಯೋಗಳಿದ್ದು, 42 ಕೋಟಿ ಜನರು ಇಂದು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದರೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತರ ರಕ್ಷಣೆಗಾಗಿ ನೋಟು ಅಮಾನಿಕರಣಗೊಳಿಸಿ ಮತ್ತು ಜಿಎಸ್‌ಟಿ ಜಾರಿಗೆ ತಂದು ಶೇ.24 ರಷ್ಟು ಸೇವಾ ತೆರಿಗೆ ವಿಧಿಸುತ್ತಿದ್ದು, 125 ಕೋಟಿ ಹೃದಯಕ್ಕೆ ಬರೆ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಿಎಸ್ಪಿ ತಾಲೂಕು ಅಧ್ಯಕ್ಷ ಮಲಾರ ರವೀಂದ್ರ, ಮುಖಂಡರಾದ ಹೊಸಮಾಳ ಚಲುವರಾಜು, ಮರಿಲಿಂಗಯ್ಯ, ಚನ್ನಿಪುರ ಮಲ್ಲೇಶ್‌, ಸಾಗರೆ ಲೋಕೇಶ್‌, ಸೋಮಶೇಖರ್‌, ವೆಂಕಟೇಶ್‌, ಕುಮಾರ್‌, ಶಿವರಾಜು, ವಿಷಕಂಠ, ಕೃಷ್ಣ, ಬ್ಯಾಟರಾಯಸ್ವಾಮಿ, ಚಂದ್ರಶೇಟ್ಟಿ, ಕುಮಾರಸ್ವಾಮಿ, ಜಯರಾಂ, ಸಂಪಂಗಿ, ಮಹದೇವಪ್ಪ, ನಂದಾ, ಚೌಡಯ್ಯ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next