Advertisement

ಡಿ.17-23: ಮಂಗಳೂರಿನಲ್ಲಿ ‘ಜಾಂಬೋರೇಟ್‌’

09:05 AM Aug 23, 2017 | Team Udayavani |

ಮಂಗಳೂರು: ಸ್ಕೌಟಿಂಗ್‌ ಮತ್ತು ಗೈಡಿಂಗ್‌ನಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕ್ರೀಯಾಶೀಲ ಹಾಗೂ ಮುಂಚೂಣಿಯಲ್ಲಿರುವ ದ.ಕ. ಜಿಲ್ಲಾ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆಶ್ರಯದಲ್ಲಿ ಡಿ.17ರಿಂದ 23ರ ವರೆಗೆ ರಾಜ್ಯಮಟ್ಟದ ‘ಜಾಂಬೋರೇಟ್‌’ ಸಮಾವೇಶ ಮಂಗಳೂರಿನ ಕೂಳೂರಿನಲ್ಲಿ ಆಯೋಜಿಸಲಾಗಿದೆ. ಸಮಾವೇಶದ ಕುರಿತಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

Advertisement

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯಸ್ಥರಾದ ಪಿ.ಜಿ.ಆರ್‌. ಸಿಂಧ್ಯಾ ಮಾತನಾಡಿ, ಸಮಾವೇಶಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ಶ್ರೀಲಂಕಾ, ಬಾಂಗ್ಲಾದೇಶದಿಂದಲೂ ತಲಾ ಒಂದು ತಂಡ ಭಾಗವಹಿಸುವಂತೆ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಅದಕ್ಕಾಗಿ ಒಂದು ವಾರ ಕಾಲ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 1,200ರಷ್ಟು ಟೆಂಟ್‌ಗಳ ವ್ಯವಸ್ಥೆ, 1000ದಷ್ಟು ಶೌಚಾಲಯಗಳ ವ್ಯವಸ್ಥೆ, ನೀರು, ಸಾರಿಗೆ ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಸಚಿವರನ್ನು ಆಗ್ರಹಿಸಿದರು. 

ಸಮಾವೇಶದಲ್ಲಿ ಭಾಗವಹಿಸುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ತಾವೇ ತಮ್ಮ ಆಹಾರವನ್ನು ತಯಾರಿಸಿಕೊಳ್ಳಲಿದ್ದು, ಅದಕ್ಕಾಗಿ ಸೂಕ್ತ ಅಡುಗೆ ಕೋಣೆಯ ವ್ಯವಸ್ಥೆಯನ್ನು ಸಮಾವೇಶ ಸ್ಥಳದಲ್ಲಿ ಕಲ್ಪಿಸಬೇಕಿದೆ. ಅಡುಗೆ ಅನಿಲ, ಆಹಾರ ಸಾಮಗ್ರಿಗಳೊಂದಿಗೆ 33 ಅಡುಗೆ ಕೋಣೆಗಳು ಹಾಗೂ ಒಂದು ಮಾಸ್ಟರ್‌ ಅಡುಗೆ ಕೋಣೆಯ ವ್ಯವಸ್ಥೆಯನ್ನು ಒದಗಿಸಬೇಕಿದೆ ಎಂದು ಅವರು ತಿಳಿಸಿದರು.

ಕೂಳೂರುವಿನ 100 ಎಕರೆ ಜಾಗದಲ್ಲಿ ಸಮಾವೇಶ ದ.ಕ. ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಆಯುಕ್ತರಾದ ಎನ್‌. ಜಿ. ಮೋಹನ್‌ ಮಾತನಾಡಿ, 27 ವರ್ಷಗಳ ಬಳಿಕ ರಾಜ್ಯಮಟ್ಟದ ಜಾಂಬೋರೇಟ್‌ ಸಮಾವೇಶವನ್ನು ದ.ಕ. ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ನಗರದ ಕೂಳೂರಿನ 100 ಎಕರೆ ಜಾಗದಲ್ಲಿ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಶಾಸಕ ಜೆ.ಆರ್‌.ಲೋಬೊ, ಮೇಯರ್‌ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌ ಉಪಸ್ಥಿತರಿದ್ದರು. 

ಸಕಲ ತಯಾರಿಗೆ ಸಚಿವ ರೈ ಸೂಚನೆ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಟುವಟಿಕೆಗಳು ಉತ್ತಮವಾಗಿದ್ದು, ಜಾಂಬೋರೇಟ್‌ ಸಮಾವೇಶ ನಡೆಸಲು ಜಿಲ್ಲೆಗೆ 27 ವರ್ಷಗಳ ಬಳಿಕ ಅವಕಾಶ ದೊರಕಿದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸಬೇಕು. ಈ ಕುರಿತಂತೆ ಶೀಘ್ರದಲ್ಲಿ ಸಮಿತಿ ರಚಿಸಿ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next