ಮಣಿಪಾಲ: ಸ್ವಸ್ಥ ಭಾರತದ ಅಂಗವಾಗಿ ಕೈ ನೈರ್ಮಲ್ಯವನ್ನು ಉತ್ತೇ ಜಿಸಿದ ಕೊಡುಗೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಸ್ಕೋಚ್ ಬೆಳ್ಳಿ ಪ್ರಶಸ್ತಿ ಪಡೆದಿದೆ. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮತ್ತು ಸಹ ಕುಲಪತಿ ಡಾ| ವಿನೋದ ಭಟ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಜಿಬು ಥಾಮಸ್ ಅವರಿಗೆ ಸ್ಕೋಚ್ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಮಾಹೆ ಮಣಿಪಾಲದ ಸಹ ಉಪಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಬಿ., ಕುಲಸಚಿವ ಡಾ| ನಾರಾಯಣ ಸಭಾಹಿತ, ಮಣಿಪಾಲ ಕೆಎಂಸಿ ಡೀನ್ ಡಾ| ಶರತ್ ಕೆ. ರಾವ್, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ| ಪದ್ಮರಾಜ ಹೆಗ್ಡೆ ಉಪಸ್ಥಿತರಿದ್ದರು. ಈ ಪ್ರಶಸ್ತಿಯೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ತನ್ನ ಪ್ರಶಸ್ತಿಗಳ ಕಿರೀಟಕ್ಕೆ ಮತ್ತೂಂದು ಗರಿಯನ್ನು ಸೇರಿಸಿಕೊಂಡಿದೆ.
2003ರಲ್ಲಿ ಸ್ಥಾಪನೆಯಾದ ಸ್ಕೋಚ್ ಪ್ರಶಸ್ತಿಯು, ಸ್ವತಂತ್ರ ಸಂಸ್ಥೆಯಾದ ಸ್ಕೋಚ್ ಗ್ರೂಪ್ ನೀಡುವ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಭಾರತವನ್ನು ಉತ್ತಮ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುವ ಜನರು, ಯೋಜನೆಗಳು ಮತ್ತು ಸಂಸ್ಥೆಗಳನ್ನು ಇದು ಗುರುತಿಸುತ್ತಿದೆ.
ನಾಮನಿರ್ದೇಶನ, ತೀರ್ಪುಗಾರರ ಮೌಲ್ಯಮಾಪನ ಮತ್ತು ನಾಮಾಂಕಿತರ ಪ್ರಸ್ತುತಿ, ಕೇಂದ್ರೀಕೃತ ಗುಂಪಿನ ಚರ್ಚೆಗಳು, ಸಂವಹನ ಮತ್ತು ಉದಾತ್ತ ಮೌಲ್ಯಮಾಪನವನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ನಡೆಯುತ್ತದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಈ ಪ್ರದೇಶದಲ್ಲಿ ಮತ್ತು ಸಮೂಹ ಆಸ್ಪತ್ರೆಗಳಲ್ಲಿ ಅರ್ಹತೆ ಮತ್ತು ಸ್ಕೋಚ್ ಬೆಳ್ಳಿ ಪ್ರಶಸ್ತಿ ಸಾಧಿಸಿದ ಮೊದಲ ಆಸ್ಪತ್ರೆಯಾಗಿದೆ.