Advertisement

ಆತ ಕೊಟ್ಟ ಪುಸ್ತಕದಿಂದ ಅಂಕಗಳು ಬಂದವು…

05:40 PM Jan 06, 2020 | Sriram |

ನಮ್ಮದು ಮಧ್ಯಮ ವರ್ಗದ ಕುಟುಂಬ. ಮನೆಯ ಪರಿಸ್ಥಿತಿ ಅಷ್ಟಕಷ್ಟೇ ಇದ್ದುದರಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆ. 10ನೇ ತರಗತಿಲ್ಲಿದ್ದ ಸಂದರ್ಭವದು. ಜಾಣೆ ಎಂದು ನನ್ನನ್ನು ಕ್ಲಾಸ್‌ ಲೀಡರ್‌ ಮಾಡಿದ್ದರು. ಊರೂರು ಅಲೆಯುತ್ತಾ 10ನೇ ತರಗತಿಯ ಗೈಡ್‌ ಮಾರುತ್ತಿದ್ದ ಒಬ್ಬ ವ್ಯಕ್ತಿ ನಮ್ಮ ಶಾಲೆಗೂ ಬಂದ. “ಗೈಡ್‌ ಬೇಕಾದವರು 10ರುಪಾಯಿ ತಂದು ಪುಸ್ತಕಕೊಳ್ಳಿ, ನಾಳೆ ಮತ್ತೆ ಬರುತ್ತೇನೆ’ ಎಂದು ಹೇಳಿ ಹೋಗಿದ್ದ. ನನಗೆ ಪುಸ್ತಕ ಕೊಳ್ಳುವ ಖುಷಿ. ಅಪ್ಪನ ಬಳಿ ಹೋಗಿ, ಗೈಡ್‌ ಕೊಳ್ಳಲು 10 ರೂ.ಬೇಕು ಅಂತ ಕೇಳಿದೆ.

Advertisement

“ಅಷ್ಟೊಂದು ಹಣ ಇಲ್ಲ ಮಗಳೇ, ಇರುವ ಪುಸ್ತಕವನ್ನೇ ಓದಿಕೋ’ ಅಂದರು. ಮರುದಿನ ಟೀಚರ್‌ ಬರದೇ ಇದ್ದುದರಿಂದ ಮೊದಲನೇ ಪಿರೀಯಡ್‌ನ‌ಲ್ಲಿ ಕ್ಲಾಸ್‌ ಲೀಡರ್‌ ಆಗಿದ್ದ ನಾನು, ಎಲ್ಲರನ್ನೂ ಸುಮ್ಮನೆ ಕೂರಿಸುವ ಕಾರ್ಯ ಮಾಡುತ್ತಿದ್ದೆ. ಹಿಂದಿನ ದಿನ ಗೈಡ್‌ ತಂದಿದ್ದ ವ್ಯಕ್ತಿ ಹೇಳಿದಂತೆ ಮತ್ತೆ ಬಂದ. ಎಲ್ಲ ವಿದ್ಯಾರ್ಥಿಗಳೂ ಒಬ್ಬೊಬ್ಬರಾಗಿ ಬಂದು 10 ರೂ. ಕೊಟ್ಟು ಅವನ ಬಳಿ ಗೈಡ್‌ ಕೊಂಡರು. ನಾನು ಪೆಚ್ಚುಮೋರೆ ಹಾಕಿಕೊಂಡು ದೂರದಲ್ಲಿ ನೋಡುತ್ತಾ ನಿಂತಿದ್ದೆ. ಎಲ್ಲಾ ಮಾರಾಟವಾದ ನಂತರ ಅವನು ನನ್ನತ್ತ ನೋಡಿ “ನಿನಗೆ ಬೇಡವಾ ಪುಟ್ಟಿ?’ ಅಂದ. ಸೋತ ಮುಖದಿಂದ ಬೇಡವೆಂಬಂತೆ ತಲೆಯಾಡಿಸಿ ನನ್ನಲ್ಲಿ 10 ರೂ. ಇಲ್ಲ ಎಂಬ ಸತ್ಯ ಅವನಿಗೆ ಗೊತ್ತಾಯಿತೋ ಏನೋ… ಹೆಗಲಿಗೆ ಬ್ಯಾಗ್‌ ಹಾಕಿಕೊಂಡು ಹೊರಗೆ ಹೋದವನು, ದೂರದಲ್ಲಿ ನಿಂತು ನನ್ನನ್ನು “ಬಾ’ ಎಂದು ಸಂಜ್ಞೆ ಮಾಡಿ ಕರೆದ. ಹತ್ತಿರ ಹೋದೆ. “ದುಡ್ಡೇನೂ ಕೊಡಬೇಡ ತಗೋ ಪುಟ್ಟಿ. ನೀನು ಇನ್ನೂ ಚೆನ್ನಾಗಿ ಓದು’ ಎಂದು ಗೈಡ್‌ ನನ್ನ ಕೈಗಿತ್ತು, ತಲೆಸವರಿ ನಗುಮೊಗದಿಂದ ಹೊರಟುಹೋದ.

ನಾನು ಇಷ್ಟಪಟ್ಟ ಗೈಡ್‌ ಸಿಕ್ಕಾಗ ತುಂಬಾ ಖುಷಿಯಾಗಿತ್ತು. 10ನೇ ತರಗತಿಯಲ್ಲಿ ಚೆನ್ನಾಗಿ ಓದಿ ಶೇ.91ರಷ್ಟು ಅಂಕ ಪಡೆದೆ. ಈಗ ಸದ್ಯಕ್ಕೆ ಸರ್ಕಾರಿ ನೌಕರಿಯಲ್ಲಿದ್ದೇನೆ. ಅಂದು ಅವನಿಗೆ ಕೊಡಲು 10 ರೂ. ಕೂಡ ಇರಲಿಲ್ಲ. ಇಂದು ಸಾವಿರಾರು ರೂ. ಸಂಪಾದಿಸುತ್ತಿದ್ದೇನೆ. ಆದರೆ ಸರಸ್ವತಿಯನ್ನು ಕೊಟ್ಟು ಆಶೀರ್ವಾದ ಮಾಡಿ ಹೋದ ಆ ದೇವರಂಥ ವ್ಯಕ್ತಿಯನ್ನು ಎಲ್ಲಿ ಹುಡುಕಲಿ? ಅವರ ನೆನಪಿಗಾಗಿ ಆ ಪುಸ್ತಕವನ್ನು ಇನ್ನು ಹಾಗೇ ಇಟ್ಟಿಕೊಂಡಿರುವೆ. ಅವರು ಎಲ್ಲೇ ಇರಲಿ, ಚೆನ್ನಾಗಿರಲಿ.

-ಸೌಮ್ಯಶ್ರೀ ಸುದರ್ಶನ್‌ ಹಿರೇಮಠ್

Advertisement

Udayavani is now on Telegram. Click here to join our channel and stay updated with the latest news.

Next