ಧಾರವಾಡ: ಆಲ್ಫೋನ್ಸೊ ಮಾಮರಗಳು ತಪ್ಪಲು ಕಾಣದಂತೆ ಹೂ ಬಿಟ್ಟು ಎರಡು ತಿಂಗಳಾಗುವ ಮುಂಚೆಯೇ ಬೆಳೆಗಾರರಿಗೆ ಮತ್ತೂಮ್ಮೆ ಮರ್ಮಾಘಾತ ನೀಡಿದೆ. ಸುದೀರ್ಘ ಸುಗ್ಗಿ, ಬೂದಿರೋಗ, ಟ್ರಿಪ್ಸ್ ನುಶಿ ಕಾಟ, ಇಬ್ಬನಿ ಮತ್ತು ಹವಾಮಾನ ವೈಪರಿತ್ಯದ ಪರಿಣಾಮ ಶೇ.78 ಮಾಮರಗಳಲ್ಲಿನ ಹೂವು, ಹೀಚು ಮಿಡಿಯಾಗುವ ಮುನ್ನವೇ ಕಮರಿ ಬಿದ್ದಿವೆ.
ಆಲ್ಫೋನ್ಸೋ ಗಿಡಗಳು ಈ ವರ್ಷ ಪ್ರೊಲಾಂಗ್ ಪ್ರೊಸೆಸ್ (ಸುದೀರ್ಘ ಸುಗ್ಗಿ)ಗೆ ಒಳಗಾಗಿ 2021ರ ನವೆಂಬರ್, ಡಿಸೆಂಬರ್ ತಿಂಗಳಿಗೆ ಬದಲಾಗಿ 2022ರ ಜನವರಿ ಮತ್ತು ಫೆಬ್ರವರಿಯಲ್ಲಿ ವಿಪರೀತ ಹೂ, ಹೀಚು ಹಿಡಿದಿದ್ದವು. ಇದೀಗ ಆಲ್ಫೋನ್ಸೋ ಶೇ.78 ಉತ್ಪಾದನೆ ಕುಸಿತಗೊಂಡಿದ್ದು, ಹೂ ಹಿಡಿದು ಆಸೆ ಮೂಡಿಸಿದ್ದ ತೋಟಗಳಲ್ಲಿ ಹೀಚುಗಳೇ ಕಮರಿ ಹೋಗಿದ್ದು, ಬೆಳೆಗಾರರು- ಮಾರಾಟಗಾರರ ಕನಸು ಕಮರಿ ಹೋದಂತಾಗಿದೆ.
ಬೂದಿರೋಗ, ಬಿಸಿಲು, ಟ್ರಿಪ್ಸ್ ಕಾಟ: ಈ ವರ್ಷದ ಫೆಬ್ರವರಿ ತಿಂಗಳಿನ ಆರಂಭದಲ್ಲಿ ತೋಟಗಳಲ್ಲಿ ಸಣ್ಣಗೆ ಕಾಣಿಸಿಕೊಂಡ ಬೂದು ರೋಗ ಮಾವಿಗೆ ಮರ್ಮಾಘಾತ ನೀಡಿದೆ. ಈ ಬೂದು ರೋಗದಿಂದ ವಿಪರೀತ ಹೂ, ಹೀಚು ಹಿಡಿದ ಮಾವು ಶೇ.40 ಉದುರಿ ಹೋಯಿತು. ಇನ್ನು ಮಾರ್ಚ್ ಆರಂಭದಲ್ಲಿ ಮಾವು ಕಾಯಿ ಕಟ್ಟಬೇಕಿತ್ತು. ಆದರೆ ವಿಪರೀತ ಬಿಸಿಲು ಮತ್ತು ಸತತ ಇಬ್ಬನಿಯಿಂದ ಶೇ.28 ಬಲಿಯಾಯಿತು. ಸೊನೆಮುಡಿ ತಿನ್ನುವ ನುಶಿ ಇದೀಗ ಕಾಣಿಸಿಕೊಂಡಿದ್ದು, ಟ್ರಿಪ್ಸ್ ಎಂಬ ನುಶಿಕೀಟದ ಬಾಧೆಗೆ ಮಾವಿನ ತೋಟಗಳೇ ನಲುಗಿ ಹೋಗುತ್ತಿವೆ. ಲಿಂಬೆಕಾಯಿ ಗಾತ್ರದ ಮಾವಿನ ಮಿಡಿಗಳು ಹಳದಿಯಾಗಿ ಕಮರಿ ಉದುರು ತ್ತಿವೆ. ಇದಕ್ಕೆ ಶೇ.10 ಮಾವು ಬಲಿಯಾಗಿದೆ. ಒಟ್ಟಿನಲ್ಲಿ ಬೂದುರೋಗ, ಬಿಸಿಲು-ಟ್ರಿಪ್ಸ್ ಕೀಟದ ಹೊಡೆತಕ್ಕೆ ಶೇ.78 ಮಾವು ಕಮರಿ ಹೋಗಿದೆ ಎನ್ನುತ್ತಿದ್ದಾರೆ ಧಾರವಾಡದ ಮಾವು ಸಂಶೋಧನಾ ಕೇಂದ್ರದ ತಜ್ಞರು.
ಲಕ್ಷಕ್ಕೇರಲಿಲ್ಲ, ಲಕ್ಷ ರೂ. ಬರಲಿಲ್ಲ: ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಫೋನ್ಸೋ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ. 2019ರಲ್ಲಿ 87 ಸಾವಿರ ಟನ್, 2020ರಲ್ಲಿ 93 ಸಾವಿರ ಟನ್ ಮಾವು ಜಿಲ್ಲೆಯಲ್ಲಿ ಉತ್ಪಾದನೆಯಾಗಿತ್ತು. 2022ರಲ್ಲಿ 10,762 ಹೆಕ್ಟೇರ್ ಪ್ರದೇಶದಲ್ಲಿನ ಮಾವಿನ ತೋಟಗಳು ಹೂ, ಹೀಚು ಹಿಡಿದಿರುವುದನ್ನು ನೋಡಿ ಈ ವರ್ಷ ಲಕ್ಷ ಟನ್‌ಗೂ ಅಧಿಕ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ ಇಬ್ಬನಿ ಹೊಡೆತಕ್ಕೆ ಇಳುವರಿ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಮಾವು ತಜ್ಞರು. ಈ ಮಧ್ಯೆ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುರಿದ ಅಕಾಲಿಕ ಮಳೆ ಆಲ್ಫೋನ್ಸೋ ಮಾವಿನ ಎಲೆಗಳಿಗೆ ಕರಿಕಪ್ಪು ಚುಕ್ಕು ರೋಗ ತಂದಿಟ್ಟಿದೆ. ಹೀಗಾಗಿ ಹೂವು, ಹೀಚು ಮೂಡಿದಾಗ ಮಾವು ಲಕ್ಷ ಲಕ್ಷ ಗಳಿಕೆ ಆಗಬಹುದು ಎಂದುಕೊಂಡಿದ್ದ ಮಾವು ಬೆಳೆಗಾರರಿಗೆ ಈ ವರ್ಷವೂ ನಿರಾಸೆಯಾಗಿದೆ.
30 ಕೋಟಿ ರೂ.ಗೆ ವಹಿವಾಟು ಕುಸಿತ?: 2018- 19ರಲ್ಲಿ ಜಿಲ್ಲೆಯಲ್ಲಿಯೇ ಅಂದಾಜು 60 ಕೋಟಿ ರೂ. ವಹಿವಾಟು ಮಾವಿನ ಸುಗ್ಗಿಯಲ್ಲಿ ನಡೆಯುತ್ತದೆ ಎಂದು ಮಾವು ಬೆಳೆಗಾರರ ಸಂಘ ಅಂದಾಜು ಮಾಡಿತ್ತು. ಆದರೆ 2020-2021ನೇ ಸಾಲಿನಲ್ಲಿ ಕೊರೊನಾ ಮಹಾಮಾರಿ-ಲಾಕ್‌ಡೌನ್ ಪರಿಣಾಮ ವಹಿ ವಾಟು 40 ಕೋಟಿ ರೂ.ಗೆ ಇಳಿಕೆ ಆಗಿತ್ತೆಂದು ಅಂದಾಜಿಸಲಾಗಿತ್ತು. ಈ ವರ್ಷ ಇದು 30 ಕೋಟಿ ರೂ. ತಲುಪುವುದು ಕಷ್ಟವೇ ಎನ್ನುತ್ತಿದ್ದಾರೆ ಬೆಳೆಗಾರರು.
ಮಾವು ಹೋಗಿ ಕಬ್ಬು ಬಂತು: ಜಿಲ್ಲೆಯಲ್ಲಿ ಕಬ್ಬು ಬೆಳೆ ಇತರ ಬೆಳೆಗಳನ್ನು ಹಿಂದಿಕ್ಕಿ ಮುನ್ನಡೆದಿದ್ದು, ಆಲ್ಫೋನ್ಸೋ ಮಾವಿನ ತೋಟಗಳನ್ನು ರೈತರು ಕಿತ್ತು ಹಾಕಿ ಕಬ್ಬು ನೆಡುತ್ತಿದ್ದಾರೆ. ಧಾರವಾಡ, ಕಲಘಟಗಿ ಮತ್ತು ಅಳ್ನಾವರ ಭಾಗದಲ್ಲಿ ಕಳೆದ 2 ವರ್ಷಗಳಲ್ಲಿ 900 ಎಕರೆಗೂ ಅಧಿಕ ಆಲೊ#àನ್ಸೋ ಮಾವಿನ ಗಿಡವನ್ನು ಕಿತ್ತು ಹಾಕಿ ಕಬ್ಬು ನೆಟ್ಟಿದ್ದಾರೆ. ಹವಾಮಾನ ವೈಪರಿತ್ಯ, ಉತ್ತಮ ಬೆಲೆ ಸಿಗದ ಪರಿಣಾಮ ಮತ್ತು ಮೌಲ್ಯವರ್ಧನೆಗೆ ಜಿಲ್ಲೆಯಲ್ಲಿ ಅವಕಾಶಗಳು ಸಿಕ್ಕದೇ ಹೋಗಿದ್ದರಿಂದ ರೈತರು ಮಾವಿನ ಮೇಲಿನ ಪ್ರೀತಿ ಕಳೆದುಕೊಳ್ಳುತ್ತಿದ್ದಾರೆ. ಕಬ್ಬಿಗೆ ಉತ್ತಮ ಬೆಲೆ ಸಿಗುತ್ತಿದ್ದು 10-15 ವರ್ಷಗಳಷ್ಟು ಹಳೆಯದಾದ ತೋಟಗಳನ್ನು ಕಿತ್ತು ಹಾಕುತ್ತಿದ್ದಾರೆ.
ಚಳಿಗಾಲದಲ್ಲಿಯೇ ಸರಿಯಾಗಿ ಹೂ ಬಿಟ್ಟಿದ್ದರೆ ಉತ್ತಮ ಬೆಳೆ ನಿರೀಕ್ಷೆ ಆಗುತ್ತಿತ್ತು. ಬೇಸಿಗೆಯ ಬಿಸಿಲಿಗೆ ಹೂ ಕಮರಿ ಹೋಯಿತು. ಬೂದು ರೋಗ ಹೆಚ್ಚಾಗಿ ಹೂವು ಕಮರಿ ಹೋಯಿತು. ಇನ್ನುಳಿದಿದ್ದು ಹೀಚು ಹಳದಿಯಾಗಿ ಉದುರುತ್ತಿದೆ. ಹೀಗಾಗಿ ಶೇ.70 ಮಾವು ಉತ್ಪಾದನೆ ಕುಸಿಯುತ್ತಿದೆ.
- ಡಾ|ಜ್ಞಾನೇಶ್ವರ ಗೋಪಾಲೆ, ಮಾವು ಬೆಳೆ ತಜ್ಞ
ತೋಟಗಳಲ್ಲಿನ 100 ಗಿಡಗಳ ಪೈಕಿ 7 ಗಿಡಗಳಲ್ಲಿ ಮಾತ್ರ ಕಾಯಿ ನಿಂತಿವೆ. ಉಳಿದವು ಹೂ,ಹೀಚಾಗಿ ಕಮರಿ ಹೋಗಿವೆ. ಇನ್ನುಳಿದ ಮಿಡಿಗಳು ಹಳದಿಯಾಗಿ ಉದುರುತ್ತಿವೆ. ಈ ವರ್ಷ ಮಾವು ಬೆಳೆದವರಿಗೆ ಮತ್ತೆ ನೋವು.
- ಕಲ್ಲನಗೌಡ ಪಾಟೀಲ, ಕ್ಯಾರಕೊಪ್ಪ ರೈತ