Advertisement
ಪಿಯುಸಿಯಲ್ಲಿ ಕ್ಲಾಸ್‌ಮೇಟ್ ಆಗಿದ್ದವನು ಮೊನ್ನೆ ಅಚಾನಕ್ಕಾಗಿ ಎದುರು ಸಿಕ್ಕ. “ನನ್ನ ಗುರುತು ಸಿಕ್ತಾ?’ ಎನ್ನುವ ಪ್ರಶ್ನೆಯೊಂದಿಗೆ ಶುರುವಾದ ಮಾತುಕತೆ ಮತ್ತಷ್ಟು ಮುಂದುವರಿಯಿತು. ಪಿಯುಸಿಯಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದವನು ಇದೀಗ ಸರ್ಕಾರಿ ಕಾಲೇಜಿನಲ್ಲಿ ಇತಿಹಾಸ ಬೋಧಿಸುವ ಅಧ್ಯಾಪಕನಾಗಿರುವ ವಿಚಾರ ಕೇಳಿ ಹುಬ್ಬೇರಿಸುವ ಸರದಿ ನನ್ನದಾಗಿತ್ತು. ನನ್ನಲ್ಲಿನ ಅಚ್ಚರಿ ಕಂಡು ವಿಜ್ಞಾನದಿಂದ ಆರ್ಟ್ಸ್ನೆಡೆಗಿನ ಪಯಣದ ಕಥೆ ಬಿಚ್ಚಿಟ್ಟ. ನಮ್ಮ ಹಾಗೆಯೇ ಪಿಯು ಮುಗಿದ ನಂತರ ಎಂಜಿನಿಯರಿಂಗ್ ಸೇರಿದ್ದ ಅವನು, ಎರಡು ವರ್ಷ ಎಂಜಿನಿಯರಿಂಗ್ ಓದಿ ಆನಂತರ ಇದು ತನ್ನ ಆಸಕ್ತಿಗೆ ಪೂರಕವಾದ ಕೋರ್ಸ್ ಖಂಡಿತಾ ಅಲ್ಲ ಎಂಬುದನ್ನು ತನಗೆ ತಾನೆ ಮನದಟ್ಟು ಮಾಡಿಕೊಳ್ಳುವುದಲ್ಲದೆ ಮನೆಯವರಿಗೂ ಕನ್ವಿನ್ಸ್ ಮಾಡಿ, ಎಂಜಿನಿಯರಿಂಗ್‌ಗೆ ಎಳ್ಳು ನೀರು ಬಿಟ್ಟು ಬಿಎ, ಎಂಎ ಓದಿ ಇದೀಗ ಇತಿಹಾಸ ಬೋಧಿಸುವ ಕಾಯಕದಲ್ಲಿ ಕಾರ್ಯನಿರತನಾಗಿರುವುದಾಗಿ ತಿಳಿಸಿದ.
Related Articles
Advertisement
ಜಾಗತೀಕರಣಕ್ಕೆ ತೆರೆದುಕೊಂಡಿರುವ ನಮ್ಮ ಉದ್ಯೋಗಾವಕಾಶಗಳ ಮೇಲೆ ಜಗತ್ತಿನ ಯಾವುದೋ ಮೂಲೆಯಲ್ಲಿ ಜರುಗುವ ಬೆಳವಣಿಗೆಯೂ ನೇರ ಪರಿಣಾಮ ಬೀರುತ್ತದೆಂಬ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಂಡು ನೋಡಿದರೆ ಸಾಕು, ನಿರ್ದಿಷ್ಟ ಕೋರ್ಸುಗಳ ಸುತ್ತ ಹರಡಿಕೊಳ್ಳುವ ಸ್ಕೋಪ್‌ನ ಗುಳ್ಳೆಗಳು ಒಡೆಯಲು ಹೆಚ್ಚು ಸಮಯ ಬೇಕಿಲ್ಲದಿರುವುದು ಮನದಟ್ಟಾಗುತ್ತದೆ. ಉದ್ಯೋಗಾವಕಾಶ ಸೃಷ್ಟಿಯ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಸ್ಕೋಪ್‌ನ ಎದೆ ಸೀಳಲು ಡಿಮಾನಿಟೈಸೇಷನ್, ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ, ಬದಲಾದ ಹೆಚ್1 ಬಿ ವೀಸಾ ನೀತಿ, ಬ್ರೆಕ್ಸಿಟ್, ಹೆಚ್ಚುತ್ತಿರುವ ಆಟೊಮೇಷನ್ ತಂತ್ರಜ್ಞಾನದ ಬಳಕೆ- ಹೀಗೆ ಏನೇನೋ ನೆಪಗಳಿವೆ. ಹಾಗಾಗಿ ಸ್ಕೋಪ್‌ಗಿಂತ ಆಸಕ್ತಿಯೇ ಕೊನೆಗೂ ಕೈ ಹಿಡಿದು ನಡೆಸುವ ಜೊತೆಗೆ ನೆಮ್ಮದಿಯನ್ನೂ ದಯಪಾಲಿಸುವ ಆಯ್ಕೆಯಾಗಿ ತೋರುತ್ತದೆ.
ವೃತ್ತಿಪರ ಹಣೆಪಟ್ಟಿ ಹೊತ್ತಿರುವ ಕೋರ್ಸುಗಳನ್ನು ಪೂರೈಸಿರುವವರು ಕೂಡ ಕೆಲಸ ಸಿಗದೆ, ಸಿಕ್ಕಿರುವ ಕೆಲಸವೂ ಸಹನೀಯವಾಗದೆ ಅತಂತ್ರರಾಗುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ. ಹಾಗಂತ ಅವುಗಳ ಸಹವಾಸವೇ ಬೇಡವೆಂಬ ನಿಲುವು ತಳೆಯುವ ಅಗತ್ಯವಿಲ್ಲ. ಆಸಕ್ತಿ ಇದ್ದರೆ ವೃತ್ತಿಪರ ಶಿಕ್ಷಣವೂ ಉತ್ತಮ ಆಯ್ಕೆಯೇ. ಫೋಟೋಗ್ರಫಿ ಕುರಿತು ಒಲವು ಬೆಳೆಸಿಕೊಂಡಿರುವ ಕೆಲ ಎಂಜಿನಿಯರಿಂಗ್ ಪದವೀಧರರು, ಸಂಪಾದನೆಗಾಗಿ ವೆಡ್ಡಿಂಗ್ ಫೋಟೊಗ್ರಫಿ ಮಾಡುತ್ತ, ಉಳಿದ ವೇಳೆಯಲ್ಲಿ ತಮ್ಮ ಆಸಕ್ತಿಗನುಗುಣವಾದ ವಿಷಯ- ವಿದ್ಯಮಾನಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸರೆ ಹಿಡಿಯುವ ಮೂಲಕ ತಮ್ಮ ಮನಸ್ಸಿಗೆ ಮುದ ನೀಡುವ ಕ್ಷೇತ್ರದಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ನಿದರ್ಶನಗಳೂ ಕಣ್ಣ ಮುಂದಿವೆ.
ಲೈಫ್ನಲ್ಲಿ ಬೇಗ ಸೆಟಲ್ ಆಗಬೇಕು ಎಂಬ ಧಾವಂತದಲ್ಲಿ ದೀರ್ಘಕಾಲ ನಮ್ಮನ್ನು ಸಲಹಬಹುದಾದ ಕ್ಷೇತ್ರಗಳತ್ತ ಕಣ್ಣು ಹಾಯಿಸದೆ ಹೋಗುವುದು, ನಮ್ಮೆದುರು ಇರಬಹುದಾದ ನಿಟ್ಟುಸಿರಿನ ಹಾದಿಗಳಿಗೆ ನಾವೇ ಬೆನ್ನು ತೋರಿದಂತೆ ಅಲ್ಲವೇ? ಸ್ಕೋಪ್‌ನ ಗುಳ್ಳೆ ಒಡೆದರೂ ಬದುಕು ಕಟ್ಟಿಕೊಳ್ಳುವ ಆತ್ಮಸ್ಥೈರ್ಯ ರೂಪುಗೊಳ್ಳುವಂತೆ ಎಚ್ಚರ ವಹಿಸುವುದು ಒಳಿತು. ಯಾವುದೂ ಸ್ಥಿರವಲ್ಲದ ವರ್ತಮಾನದಲ್ಲಿ ಆಸಕ್ತಿಯೆಡೆಗೆ ವಾಲುವುದೇ ಸೂಕ್ತ ಆಯ್ಕೆಯಾಗಿ ತೋರುತ್ತಿದೆ.
ಅಪ್ಪ- ಅಮ್ಮನ ಮಾತಿಗೆ ಮಣಿಯದಿರಿ. ಲೈಫು ನಿಮೆ ಸಿನಿಮಾ, ನೀವೇ ಡೈರೆಕ್ಟ್ ಮಾಡಿ… ಬಚಾವ್ ಆಗಲು ಇದೊಂದೇ ದಾರಿ…– ಕೋರ್ಸ್‌ನ ಆಯ್ಕೆಗೂ ಮುನ್ನ ಅಪ್ಪ- ಅಮ್ಮನ ಬಳಿ ನಿಮ್ಮ ಆಸಕ್ತಿಯ ಬಗ್ಗೆ ಹೇಳಿಕೊಳ್ಳಿ.
– ನಿಮ್ಮ ಆಸಕ್ತಿಯಲ್ಲಿ ನೀವೇನು ಸಾಧಿಸಿದ್ದೀರಿ ಎಂಬುದನ್ನು ಪೋಷಕರಿಗೆ ಮನದಟ್ಟು ಮಾಡಿಕೊಡಿ.
– ಹವ್ಯಾಸವನ್ನೇ ಬದುಕಿಗೆ ದಾರಿ ಮಾಡಿಕೊಂಡವರ ಉದಾಹರಣೆಯನ್ನು ಅವರ ಮುಂದಿಡಿ.
– ವೃತ್ತಿಪರ ಕೋರ್ಸ್ ತೆಗೆದುಕೊಂಡವರ ಸ್ಥಿತಿಗತಿಗಳನ್ನು ಅವರಿಗೆ ತಿಳಿಸಿ.
– ಸ್ಕೋಪ್ ಇದೆಯೆಂಬ ಕಾರಣಕ್ಕೆ ಆಸಕ್ತಿಯ ಹಾದಿಯನ್ನು ಬದಲಿಸೋದು ಅಷ್ಟು ಸಮಂಜಸವಲ್ಲ.
– ಒಂದು ವೇಳೆ ಬಲವಂತವಾಗಿ ಬೇರೆ ಹಾದಿಯನ್ನೇ ಒಪ್ಪಿಕೊಂಡರೂ, ಅದರ ಕಷ್ಟ-ನಷ್ಟಗಳ ಬಗ್ಗೆ ಮನೆಯವರಿಗೆ ವಿವರಿಸಿ. – ಅದು ಡಬ್ಟಾ ಕೋರ್ಸ್, ನೀನ್ಯಾಕೆ ತಗೊಂಡೆ?
ಆ ಕೋರ್ಸಿಗೆ ಸಿಕ್ಕಾಪಟ್ಟೆ ಡಿಮ್ಯಾಂಡು
– ಇದನ್ನು ಓದಿದ್ರೆ ನಿಂಗೆ ಕೆಲ್ಸ ಸಿಗುತ್ತಾ?
– ನೀನು ಲೈಫಲ್ಲಿ ಸೆಟಲ್ ಆದ್ಹಂಗೆ…
– ನಿಂಗೆ ಆ ಸಬೆjಕ್ಟ್ ಸೂಟ್ ಆಗುತ್ತಾ? ಎಚ್.ಕೆ. ಶರತ್