Advertisement

ಶಾಂಘೈ ಸಮ್ಮೇಳನ: ಭಾರತದ ನಿಲುವು ಸ್ವಾಗತಾರ್ಹ

06:00 AM Jun 12, 2018 | |

ಚೀನದ ಖೀಂಗ್ಡಾವೊದಲ್ಲಿ ಜರಗಿದ ಎಂಟು ದೇಶಗಳ ಶಾಂಘೈ ಸಹಕಾರ ಸಂಘಟನೆ ಸಮ್ಮೇಳನದಲ್ಲಿ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಅಂಕಿತ ಹಾಕಲು ನಿರಾಕರಿಸಿ ಭಾರತ ದಿಟ್ಟತನ ಮೆರೆದಿದೆ. ಸಮ್ಮೇಳನದಲ್ಲಿ ಮಾತನಾಡಿದ ಮೋದಿ ಚೀನದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವು ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಂಪರ್ಕ ಯೋಜನೆಗಳನ್ನು ಭಾರತ ಬೆಂಬಲಿಸುತ್ತದೆ. ಆದರೆ ಇಂಥ ಯೋಜನೆಗಳು ದೇಶದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಈ ಅಂಶವನ್ನೊಳಗೊಂಡ ಯೋಜನೆಗಳನ್ನು ಮಾತ್ರ ಭಾರತ ಬೆಂಬಲಿಸುತ್ತದೆ ಎನ್ನುವ ಅವರ ಹೇಳಿಕೆಯಲ್ಲಿ ಚೀನಕ್ಕೆ ನೇರವಾದ ಸಂದೇಶವಿದೆ. 

Advertisement

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಪೂರ್ಣ ಸದಸ್ಯ ರಾಷ್ಟ್ರವಾಗಿ ಭಾಗವಹಿಸಿದ್ದು ಇದೇ ಮೊದಲು. ಜತೆಗೆ ಪಾಕಿಸ್ಥಾನವೂ ಇದೆ. ಉಳಿದ ಎಂಟು ದೇಶಗಳು ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಅಂಕಿತ ಹಾಕಿದರೆ ಭಾರತ ಮಾತ್ರ ಮತ್ತೂಮ್ಮೆ ತಿರಸ್ಕರಿಸಿದೆ. ಅಂತರಾಷ್ಟ್ರೀಯ ಯೋಜನೆಯೊಂದನ್ನು ದೇಶದಲ್ಲಿದ್ದುಕೊಂಡು ವಿರೋಧಿಸುವುದು ಬೇರೆ ಅಂತರಾಷ್ಟ್ರೀಯ ವೇದಿಕೆಯಲ್ಲಿದ್ದುಕೊಂಡು ವಿರೋಧಿಸುವುದು ಬೇರೆ. ದೇಶದಲ್ಲಾದರೆ ಇದಕ್ಕೆ ರಾಜಕೀಯ ಸೇರಿದಂತೆ ಹಲವು ಕಾರಣಗಳನ್ನು ಹೇಳಬಹುದು. ಆದರೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಮಾತನಾಡುವಾಗ ದೇಶದ ಹಿತರಕ್ಷಣೆಯೊಂದೇ ಮುಖ್ಯವಾಗಿರುತ್ತದೆ. 

ಬೆಲ್ಟ್ ಆ್ಯಂಡ್‌ ರೋಡ್‌ ಅಥವಾ ಒನ್‌ ಬೆಲ್ಟ್ ಒನ್‌ ರೋಡ್‌ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಕನಸಿನ ಯೋಜನೆ. ಮಧ್ಯ ಏಶ್ಯಾ, ಯುರೋಪ್‌, ಗಲ್ಫ್ ಮತ್ತು ಆಫ್ರಿಕಾ ಖಂಡಗಳ ದೇಶಗಳ ಜತೆಗೆ ಸಮುದ್ರ ಮತ್ತು ಭೂ ಮಾರ್ಗವಾಗಿ ವ್ಯಾಪಾರ ಸಂಬಂಧ ಬೆಸೆಯುವ ಬೃಹತ್‌ ಯೋಜನೆಯಿದು. 32 ಲಕ್ಷ ಕೋ. ರೂ. ವೆಚ್ಚದ ಈ ಯೋಜನೆಗೆ 80 ದೇಶಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳುವಲ್ಲಿ ಚೀನ ಯಶಸ್ವಿಯಾಗಿದೆ. ಈ ಯೋಜನೆಯ ಒಂದು ರಸ್ತೆ ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತಿದೆ ಎನ್ನುವುದೇ ಭಾರತದ ಕಳವಳಕ್ಕೆ ಕಾರಣ. ಚೀನದ ರಸ್ತೆ ಯೋಜನೆ ಈ ಭಾಗದಲ್ಲಿ ಹಾದು ಹೋದರೆ ವಿವಾದಿತ ಭೂಪ್ರದೇಶದ ಮೇಲೆ ಹಕ್ಕು ಸಾಧಿಸಲು ನಮಗೆ ಕಷ್ಟವಾಗಲಿದೆ. ಹೀಗಾಗಿಯೇ 2013ರಲ್ಲಿ ಚೀನ ಈ ಯೋಜನೆಯನ್ನು ಘೋಷಿಸಿದಾಗಲೇ ಭಾರತ ವಿರೋಧ ವ್ಯಕ್ತಪಡಿಸಿತ್ತು. ಇದರ ಹೊರತಾಗಿ ಯೂ ಚೀನ ಯೋಜನೆಯನ್ನು ಮುಂದುವರಿಸುತ್ತಿದೆ. ಇಂತಹ ಸಂದರ್ಭ ದಲ್ಲಿ ಚೀನದ ನೆಲದಲ್ಲಿ ನಿಂತುಕೊಂಡೇ ಯೋಜನೆಗೆ ನಮ್ಮ ವಿರೋಧವಿದೆ ಎಂದು ಹೇಳಿರುವುದು ಕೇಂದ್ರದ ದೃಢ ನಿಲುವನ್ನು ತೋರಿಸುತ್ತದೆ. 

ಒನ್‌ ಬೆಲ್ಟ್ ಒನ್‌ ರೋಡ್‌ ಯೋಜನೆ ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಎಂದಿಗೂ ಅಪಾಯಕಾರಿಯೇ. ಅದಲ್ಲದೆ ಹಿಂದೂ ಮಹಾಸಾಗರದ ಮೇಲಿರುವ ನಮ್ಮ ಪಾರಮ್ಯಕ್ಕೂ ಧಕ್ಕೆಯಾಗಲಿದೆ. ಚೀನ ಸಮುದ್ರ ಮಾರ್ಗದ ಮೇಲೆ ಹೆಚ್ಚೆಚ್ಚು ಹೂಡಿಕೆ ಮಾಡಿದಷ್ಟೂ ನಮ್ಮ ಹಿಡಿತ ಸಡಿಲವಾಗುವ ಅಪಾಯವಿದೆ. ಅಲ್ಲದೆ ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ ಢಾಳಾಗಿ ಗೋಚರಿಸುತ್ತಿದೆ. ವ್ಯಾಪಾರ ಸಂಬಂಧ ವರ್ಧನೆ ಎಂದು ಚೀನ ಹೇಳುತ್ತಿದ್ದರೂ ಒಳ ಉದ್ದೇಶವೇ ಬೇರೆ. ಹೆಚ್ಚಿನ ದೇಶಗಳನ್ನು ತನ್ನ ವ್ಯಾಪಾರ-ವ್ಯವಹಾರದ ಪಾಲುದಾರನನ್ನಾಗಿ ಮಾಡಿಕೊ ಳ್ಳುವ ಮೂಲಕ ಜಗತ್ತಿನ ದೊಡ್ಡಣ್ಣನಾಗುವ ಉದ್ದೇಶ ಕ್ಸಿ ಜಿನ್‌ಪಿಂಗ್‌ಗಿದೆ. ಕ್ಸಿ ಇತ್ತೀಚೆಗೆ ತನ್ನ ಅಧಿಕಾರವಧಿಯನ್ನು ಆಜೀವಪರ್ಯಂತ ವಿಸ್ತರಿಸಿಕೊಂಡಿ ರುವುದು ಕೂಡಾ ಈ ಒಂದು ಅನುಮಾನಕ್ಕೆ ಇಂಬು ಕೊಡುತ್ತಿದೆ. 

ಇದರ ಹೊರತಾಗಿಯೂ ಖೀಂಗ್ಡಾವೊ ಸಮ್ಮೇಳನ ಚೀನ ಭಾರತದ ದ್ವಿಪಕ್ಷೀಯ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಗಮನಾರ್ಹ ಅಂಶ. ಡೋಕ್ಲಾಂ ಬಿಕ್ಕಟ್ಟಿನ ಬಳಿಕ ಹದಗೆಟ್ಟಿದ್ದ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಕೇಂದ್ರ ಸರಕಾರ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಕ್ಸಿ ಜತೆಗೆ ಮೋದಿ ವೈಯಕ್ತಿಕವಾದ ಸೌಹಾರ್ದ ಸಂಬಂಧವನ್ನೂ ಹೊಂದಿದ್ದು ರಾಜತಾಂತ್ರಿಕ ಸಂಬಂಧ ಸುಧಾರಣೆಯಲ್ಲಿ ಇದು ಕೂಡಾ ಪ್ರಮುಖ ಪಾತ್ರ ವಹಿಸಿದೆ. ನಾಲ್ಕು ವರ್ಷಗಳಲ್ಲಿ ಉಭಯ ನಾಯಕರು 14 ಸಲ ಭೇಟಿಯಾಗಿದ್ದಾರೆ ಹಾಗೂ ಈ ವರ್ಷದಲ್ಲೇ ಇನ್ನೆರಡು ಭೇಟಿಗಳು ಸಂಭವಿಸಲಿವೆ. ಇಂಥ ಸಹಕಾರ ಉಭಯ ದೇಶಗಳಿಗೂ ಹಿತವನ್ನುಂಟು ಮಾಡಬಹುದು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next