Advertisement
ಪ್ರಸ್ತುತ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಪ್ರಯಾಣ ದರದಲ್ಲಿ ಶೇ. 15ರಷ್ಟು ರಿಯಾಯಿತಿ ನೀಡಲಾಗಿದೆ. ಈ ಪ್ರಮಾಣವನ್ನು ಕೇವಲ ಶೇ. 5ಕ್ಕೆ ಸೀಮಿತಗೊಳಿಸುವ ಪ್ರಸ್ತಾವ ಬೆಂಗಳೂರು ಮೆಟ್ರೋ ರೈಲು ನಿಗಮದ ಮುಂದಿದೆ. ತನ್ನ ಆದಾಯ ಹೆಚ್ಚಿಸಿ ಕೊಳ್ಳಲು ಈ ಐಡಿಯಾ ಮಾಡಿದೆ. ಆದರೆ, ಮತ್ತೂಂದೆಡೆ ಲಕ್ಷಾಂತರ ಪ್ರಯಾಣಿಕರಿಗೆ ಇದರಿಂದ ಹೊರೆ ಬೀಳಲಿದೆ. ನಿತ್ಯ ಸುಮಾರು 4.20 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಅರ್ಧಕ್ಕರ್ಧ ಶೇ. 68ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಒಂದು ವೇಳೆ ರಿಯಾಯಿತಿಗೆ ಶೇ. 10ರಷ್ಟು ಕತ್ತರಿ ಹಾಕಿದರೆ, ಕಾರ್ಯಾಚರಣೆಯಿಂದ ಪ್ರತಿ ದಿನ 7ರಿಂದ 8 ಲಕ್ಷ ರೂ. ಹೆಚ್ಚುವರಿ ಆದಾಯ ಅನಾಯಾಸವಾಗಿ ಹರಿದುಬರಲಿದೆ. ಮಾಸಿಕ ಇದು 2 ಕೋಟಿ ರೂ. ಆಗಲಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.
Related Articles
Advertisement
50 ರೂ. ದಂಡ : ಟಿಕೆಟ್ ಪಡೆದು ಪ್ರಯಾಣಿಸು ವವರು ನಿಗದಿತ ನಿಲ್ದಾಣದ ಬದಲಿಗೆ ಮುಂದಿನ ನಿಲ್ದಾಣಕ್ಕೆ ಇಳಿದರೆ, ಅಂತಹವರಿಗೆ 50 ರೂ. ದಂಡ ವಿಧಿಸಲೂ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿಯೂ ಚಿಂತನೆ ಇದೆ. ಆದರೆ, ಅಂತಿಮವಾಗಿಲ್ಲ. ಅಷ್ಟಕ್ಕೂ ಇದನ್ನು ಹೊಸದಾಗಿ ಪರಿಚಯಿಸುತ್ತಿಲ್ಲ. ಮೆಟ್ರೋ ಕಾಯ್ದೆ ಪ್ರಕಾರ ಹೀಗೆ ನಿಗದಿತ ನಿಲ್ದಾಣದ ಬದಲಿಗೆ ಮುಂದಿನ ನಿಲ್ದಾಣದಲ್ಲಿ ಇಳಿಯುವವರಿಗೆ ದಂಡ ವಿಧಿಸಲು ಅವಕಾಶ ಇದೆ. ದಂಡ ಪಾವತಿಸದವರನ್ನು ನ್ಯಾಯಾ ಲಯಕ್ಕೂ ಹಾಜರುಪಡಿಸುವ ಅಧಿಕಾರವೂ ಇದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಇಂತಹ ಹಲವಾರು ಪ್ರಸ್ತಾವನೆಗಳು ಬಂದಿರುತ್ತವೆ. ಆದರೆ, ಸ್ಮಾರ್ಟ್ ಕಾರ್ಡ್‌ಗೆ ಇರುವ ರಿಯಾಯಿತಿ ಪ್ರಮಾಣ ಕಡಿತದ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸೂಕ್ತ ನಿರ್ಧಾರದ ನಂತರ ತಿಳಿಸಲಾಗುವುದು. -ಅಜಯ್ ಸೇಠ್ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು
-ವಿಜಯಕುಮಾರ್ ಚಂದರಗಿ