ರಾಣಿಬೆನ್ನೂರ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಗುಡಿಹೊನ್ನತ್ತಿ ಗ್ರಾಮದ ಜಮೀನುಗಳಲ್ಲಿ ಅಡಿಕೆ ಸಸಿ ನಾಟಿ ಮಾಡುತ್ತಿರುವ ಕ್ಷೇತ್ರಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ 1/3ರಷ್ಟನ್ನು ಒಂದು ವರ್ಷದ ಅಡಿಕೆ ಗಿಡಗಳಿಗೆ, 2/3 ರಷ್ಟು ಎರಡು ವರ್ಷ ಗಿಡಗಳು ಮತ್ತು 3 ವರ್ಷ ಮೇಲ್ಪಟ್ಟ ಗಿಡಗಳಿಗೆ ಪೂರ್ತಿ ಪ್ರಮಾಣ ಒದಗಿಸಬೇಕು. ಅಡಿಕೆ ಗಿಡಗಳ ಸಾಲಿನ ಮಧ್ಯ ಭಾಗದಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳಾದ ಸೆಣಬು, ದಯಾಂಚಾ ಬೆಳೆ ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿ ಹೂವು, ಕಾಯಿ ಕಟ್ಟುವ ಮೊದಲು ಕತ್ತರಿಸಿ ಮಣ್ಣಿನಲ್ಲಿ ಸೇರಿಸಬೇಕು ಎಂದರು.
ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಮಾತನಾಡಿ, ನೀರು ಬಸಿದು ಹೋಗುವ ಕೆಂಪು ಗೋಡು, ಜಂಬಿಟ್ಟಿಗೆ ಅಥವಾ ಮೆಕ್ಕಲು ಗೋಡು ಮಣ್ಣು ಅಡಿಕೆ ಬೆಳೆಗೆ ಉತ್ತಮ. ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣಿನ ಪ್ರದೇಶಗಳು ಅಡಿಕೆ ಬೆಳೆಗೆ ಯೋಗ್ಯವಲ್ಲ. ಮಣ್ಣಿನ ರಸಸಾರ 6ರಿಂದ 7 ಸೂಕ್ತ. ಇದು ಗಾಳಿಯಲ್ಲಿ ಹೆಚ್ಚು ತೇವಾಂಶ ಮತ್ತು ಅಧಿಕ ಉಷ್ಣಾಂಶವಿರುವ ವಾತಾವರಣ ಉತ್ತಮ ಎಂದರು.
ಕೇಂದ್ರದ ತೋಟಗಾರಿಕೆ ತಜ್ಞ ಡಾ| ಸಂತೋಷ ಮಾತನಾಡಿ, ಅಡಿಕೆ ಸಸಿ ನಾಟಿ ಮಾಡಲು ಕನಿಷ್ಟ 5 ಗರಿ ಹೊಂದಿದ್ದು, 12-18 ತಿಂಗಳು ವಯಸ್ಸಿನ ಗಿಡ್ಡ ಸಸಿಗಳನ್ನು ತೋಟದಲ್ಲಿ ನಾಟಿ ಮಾಡಲು ಆರಿಸಬೇಕು. ಇದಕ್ಕಿಂತ ಕಡಿಮೆ ಮತ್ತು ಹೆಚ್ಚಿನ ವಯಸ್ಸಿನ ಸಸಿ ನಾಟಿಗೆ ಬಳಸಬಾರದು ಎಂದರು. ಜಮೀನಿನ ಪಶ್ಚಿಮ ಮತ್ತು ದಕ್ಷಿಣ ಅಂಚಿನಲ್ಲಿ ಮಹಾಗನಿ, ಬೇವು, ಮುರುಗಲು, ಸಿಲ್ವರ್‌ಓಕ್, ಸರ್ವೆ ಇತ್ಯಾದಿ ಸಸಿ ನಾಟಿ ಮಾಡಿ ಶಾಶ್ವತ ಗಾಳಿತಡೆ ಒದಗಿಸಬೇಕು. ಭೂಮಿ ಆಧರಿಸಿ 75 ರಿಂದ 90 ಸೆಂ.ಮೀ. ಗುಣಿಗಳನ್ನು ತೆಗೆದು ಮೇಲ್ಮಣ್ಣು ಮತ್ತು ಗೊಬ್ಬರ ಮಿಶ್ರಣದಿಂದ ತುಂಬಬೇಕು. ಅವುಗಳ ಮಧ್ಯದಲ್ಲಿ ಸಸಿಗಳನ್ನು 30-45 ಸೆಂ.ಮೀ. ಆಳದಲ್ಲಿ ನಾಟಿ ಮಾಡಬೇಕು ಎಂದರು.
ಅಡಿಕೆ ಮರಗಳು ಬಿಸಿಲಿನ ತಾಪದಿಂದ ಸುಡುವುದನ್ನು ತಪ್ಪಿಸಲು ನಿರ್ದಿಷ್ಟ ದಿಕ್ಕಿನಲ್ಲಿ ನಾಟಿ ಮಾಡಬೇಕು. ಚೌಕಾಕಾರದಲ್ಲಿ ಸಸಿ ನಾಟಿ ಮಾಡುವಾಗ ಉತ್ತರ ದಕ್ಷಿಣ ರೇಖೆ 350ಯಷ್ಟು ಪಶ್ಚಿಮ ದಿಕ್ಕಿನೆಡೆಗೆ ವಾಲುವಂತೆ ಎಳೆಯಬೇಕು. ಈ ರೀತಿ ಎಳೆದ ರೇಖೆಗಳಲ್ಲಿ ಸಸಿ ನಾಟಿ ಮಾಡಿದಾಗ ಸಾಲಿನ ಮೊದಲಿನ ಗಿಡಗಳಿಗೆ ಮಾತ್ರ ಬಿಸಿಲಿನಿಂದ ರಕ್ಷಿಸಲು ಒಣಗಿದ ಅಡಿಕೆ ಎಲೆ ಅಥವಾ ತೆಂಗಿನ ಗರಿಗಳನ್ನು ಅಡಿಕೆ ಮರದ ಕಾಂಡದ ಸುತ್ತಲು ಕಟ್ಟಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗುಡಿಹೊನ್ನತ್ತಿ ಗ್ರಾಮದ ಅಡಕೆ ಬೆಳೆಗಾರ ಬಸವರಾಜ ಪರಮೇಶಪ್ಪ ತೋಟದ ಸೇರಿದಂತೆ ಇತರರಿದ್ದರು.