Advertisement

ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು: ಖಾದರ್‌

01:22 AM Sep 08, 2019 | Team Udayavani |

ಮಂಗಳೂರು: ಚಂದ್ರಯಾನ- 2ನ್ನು ವಿಜ್ಞಾನಿಗಳ ವೈಫ‌ಲ್ಯವೆಂದು ಪರಿಗಣಿಸದೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ವಿಜ್ಞಾನಿಗಳು ಇದರಿಂದ ಕುಗ್ಗಬಾರದು. ಇಂದಲ್ಲ ನಾಳೆ ಅವರು ಗುರಿ ತಲುಪುವ ವಿಶ್ವಾಸ ನಮಗಿದ್ದು, ವಿಜ್ಞಾನಿಗಳು ನಮ್ಮ ಹೆಮ್ಮೆ ಎಂದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೀಡಾದಾಗ ನೆರವು ನೀಡಲು ಹಿಂದೆ ಮುಂದೆ ನೋಡಿದ ಪ್ರಧಾನಿ ಮೋದಿ, ರಷ್ಯಾಕ್ಕೆ ಘೋಷಿಸಿರುವ ನೂರು ಕೋ. ಡಾಲರ್‌ ನೆರವು ಹಣ ಎಲ್ಲಿಂದ? ದೇಶ ಸಂಕಷ್ಟದಲ್ಲಿರುವಾಗ ಈ ಮೂಲಕ ಸರಕಾರ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಈ ಬಗ್ಗೆ ಜನತೆಗೆ ಪ್ರಧಾನಿ ಉತ್ತರಿಸಬೇಕು ಎಂದು ಖಾದರ್‌ ಒತ್ತಾಯಿಸಿದರು.

ತೊಗರಿಬೇಳೆ ರದ್ದತಿ ಹಿಂಪಡೆಯಲು ಒತ್ತಾಯ ಜನಸಾಮಾನ್ಯರಿಗೆ ಪಡಿತರ ವ್ಯವಸ್ಥೆಯಡಿ ನೀಡಲಾಗುತ್ತಿದ್ದ ತೊಗರಿ ಬೇಳೆಯನ್ನು ರದ್ದುಗೊಳಿಸಿರುವ ಸರಕಾರದ ಕ್ರಮ ಜನವಿರೋಧಿ. ಕೂಡಲೆ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಖಾದರ್‌ ಆಗ್ರಹಿಸಿದರು. ರದ್ದು ವಾಪಸ್‌ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್‌ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರಕಾರ ಪಡಿತರ ಚೀಟಿಯ ಗೊಂದಲ ಸೃಷ್ಟಿಮಾಡಿದೆ. ಈಗಾಗಲೇ ಪ್ರವಾಹದಿಂದ ಬಹುತೇಕರ ಪಡಿತರ ಚೀಟಿ ನೀರುಪಾಲಾಗಿದೆ. ಜನರಿಗೆ ಸೌಲಭ್ಯ ನೀಡುವುದು ಬಿಟ್ಟು ಸೌಲಭ್ಯ ಕಸಿಯಲು ಹೊರಟದ್ದು ಸರಿಯಲ್ಲ. ರೇಷನ್‌ ಕಾರ್ಡ್‌ ಕಳೆದುಕೊಂಡ ಪ್ರವಾಹ ಪೀಡಿತರಿಗೆ ಕೂಡಲೇ ಆದ್ಯತೆ ಮೇರೆಗೆ ಕಾರ್ಡ್‌ ವಿತರಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುತೇಕ ಎಲ್ಲ ಮಂತ್ರಿಗಿರಿಗಳನ್ನು ತನ್ನ ಬಳಿಯೇ ಇರಿಸಿಕೊಂಡಿದ್ದಾರೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಎಂಬುದನ್ನಾದರೂ ಹೇಳಲಿ ಎಂದು ಖಾದರ್‌ ಒತ್ತಾಯಿಸಿದರು.

ಸೆಂಥಿಲ್‌ ರಾಜೀನಾಮೆ ಕಳವಳಕಾರಿ
ಶಶಿಕಾಂತ್‌ ಸೆಂಥಿಲ್‌ ರಾಜೀನಾಮೆ ಕಳವಳಕಾರಿ. ಅವರಿಗೆ ದೇಶದ ಪ್ರಸಕ್ತ ಪರಿಸ್ಥಿತಿ ಬಗ್ಗೆ ಆತಂಕವಿದ್ದಲ್ಲಿ, ತನ್ನ ರಾಜೀನಾಮೆಯನ್ನು ಹಿಂದಕ್ಕೆ ಪಡೆದು ರಜೆಯಲ್ಲಿ ತೆರಳಿ ಮತ್ತೆ ಕರ್ತವ್ಯಕ್ಕೆ ಮರಳಬಹುದು. ಅಂತಹ ಅವಕಾಶ ಅವರಿಗಿದೆ. ಆ ಬಗ್ಗೆ ಅವರು ಯೋಚಿಸಬೇಕಾಗಿದೆ ಎಂದು ಖಾದರ್‌ ಹೇಳಿದರು.

ವೈಫ‌ಲ್ಯಕ್ಕೆ ರಷ್ಯಾ ಕಾರಣ:ಖಾದರ್‌ ಆರೋಪ
ಚಂದ್ರಯಾನ- 2 ವೈಫ‌ಲ್ಯದಲ್ಲಿ ರಷ್ಯಾದ ಷಡ್ಯಂತ್ರದ ಅನುಮಾನವಿದೆ ಎಂದು ಯು.ಟಿ. ಖಾದರ್‌ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.

ಕೇಂದ್ರ ಸರಕಾರ 2007ರಲ್ಲಿ ಈ ಯೋಜನೆಗೆ ಅನುಮೋದನೆ ಪಡೆದಿತ್ತು. ಆ ಸಮಯದಲ್ಲಿಯೇ ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್‌ ಮತ್ತು ರೋವರ್‌ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾವು ಲ್ಯಾಂಡರ್‌ ನೀಡುವುದಾಗಿ ತಿಳಿಸಿತ್ತು. ಸಮಯಕ್ಕೆ ಸರಿಯಾಗಿ ಅದು ಲ್ಯಾಂಡರ್‌ ನೀಡಿರಲಿಲ್ಲ. ಆದರೂ ಹಿಂಜರಿಯದ ಭಾರತದ ವಿಜ್ಞಾನಿಗಳು ಸ್ವತಃ ಲ್ಯಾಂಡರ್‌ ಸಿದ್ಧಪಡಿಸಿದ್ದರು. ಕೊನೆ ಹಂತ
ದಲ್ಲಿ ಲ್ಯಾಂಡರ್‌ ಸಂಪರ್ಕ ಕಡಿತಗೊಂಡಿದ್ದು, ಈ ವೈಫ‌ಲ್ಯದ ಹಿಂದೆ ಭಾರತದ ಅಭ್ಯುದಯ ಬಯಸದ ಅಂ.ರಾ. ಮಟ್ಟದ ಷಡ್ಯಂತ್ರದ ಅನುಮಾನ ಕಾಡುತ್ತಿದೆ. ಎಂದರು.

Advertisement

Udayavani is now on Telegram. Click here to join our channel and stay updated with the latest news.

Next