ನವದೆಹಲಿ: ರೋಬೋಟ್ ಎಂಬ ಪದ ಚಿರಪರಿಚಿತ. ಆದರೆ ಜೈವಿಕ ರೋಬೋಟ್ ಎಂಬ ವಿಚಾರ ಕೇಳಿದ್ದೀರಾ? ಇದು ವಿಜ್ಞಾನಿಗಳ ಹೊಸ ಪ್ರಯೋಗ.
ಮಾಮೂಲಿ ಲೋಹಗಳಿಂದಲೇ ತುಂಬಿರುವ ರೋಬೋಟ್‌ಗಳಿಗೆ ಜೀವದ ಸ್ಪರ್ಶ ನೀಡುವುದು ವಿಜ್ಞಾನಿಗಳ ಉದ್ದೇಶ. ಟೋಕಿಯೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೋಬೋಟ್ ಬೆರಳನ್ನು ತಯಾರಿಸಿದ್ದಾರೆ. ಇದರ ವಿಶೇಷವೇನು ಗೊತ್ತಾ? ಜೀವಂತ ಜೀವಕೋಶಗಳಿರುವ ಚರ್ಮವನ್ನು ಇದಕ್ಕೆ ಅಳವಡಿಸಲಾಗಿದೆ. ಇದನ್ನು ನೋಡಿದಾಗ, ಸ್ಪರ್ಶಿಸಿದಾಗ ಜೀವಂತ ಬೆರಳು ಎಂಬ ಭಾವ ಬರುವಂತೆ ಮಾಡಲಾಗಿದೆ.
ರೋಬೋಟ್ ಮತ್ತು ಮನುಷ್ಯನ ಅಂಗಾಂಶಗಳನ್ನು ಒಗ್ಗೂಡಿಸಿದ ಮೊದಲ ಯತ್ನ ಇದು. ಈ ರೋಬೋಟ್ ಬೆರಳಿನಲ್ಲಿ ಜೀವಕೋಶವಿರುವ ಚರ್ಮವನ್ನು ಅಳವಡಿಸಲಾಗಿದೆ. ಈ ಬೆರಳನ್ನು ಟಚ್‌ಸ್ಕ್ರೀನ್‌ಗಳಲ್ಲಿ, ಜೈವಿಕ ಸಂವೇದನೆ ಇರುವ ಅಪ್ಲಿಕೇಶನ್‌ಗಳಲ್ಲಿ ಬಳಸಲು ಸಾಧ್ಯವಿದೆ!
ಅರ್ಥಾತ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದು! ಚರ್ಮಕ್ಕೆ ಜೀವಕೋಶಗಳನ್ನು ಅಳವಡಿಸಿರುವುದರಿಂದ ಅದು ತನ್ನಷ್ಟಕ್ಕೆ ತಾನೇ ಗಾಯಗಳನ್ನು ಗುಣಪಡಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.
ಏನಿದರ ವಿಶೇಷತೆ?: ರೋಬೋಟ್ ಬೆರಳನ್ನು ಜೀವಂತವಾಗಿ ಕಾಣಿಸಲಷ್ಟೇ ಚರ್ಮವನ್ನು ಬಳಸಿದ್ದಲ್ಲ. ಅದರಲ್ಲಿ ಜೀವಂತ ಸಂವೇದನೆಯೂ ಇರಲಿದೆ. ಅದಕ್ಕಾಗಿ ಕೃತಕ ಚರ್ಮವನ್ನು ಹೈಡ್ರೋಜೆಲ್ (ಹಗುರ ಕೊಲ್ಯಾಜಿನ್ ಮ್ಯಾಟ್ರಿಕ್ಸ್) ಬಳಸಿ ತಯಾರಿಸಲಾಗಿದೆ. ಇದರೊಳಗೆ ಫೈಬ್ರೊಬ್ಲಾಸ್ಟ್ಸ್ ಮತ್ತು ಕೆರೆಟಿನಾಸೈಟ್ಸ್ ಎಂಬ ಜೀವಕೋಶಗಳನ್ನು ಅಳವಡಿಸಲಾಗಿದೆ.
ಈ ವಿಷಯ ಮ್ಯಾಟರ್ ಎಂಬ ವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಇದು ರೋಬೋಟ್‌ಗಳ ಕಲ್ಪನೆಯನ್ನೇ ಬದಲಾಯಿಸುವುದು ಖಚಿತವಾಗಿದೆ.