ಚಿತ್ರದುರ್ಗ: ವಿಜ್ಞಾನ ವಿಷಯದಲ್ಲಿ ನಿರ್ದಿಷ್ಟ ಗುರಿ, ಉದ್ದೇಶ ಹೊಂದಲು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಪ್ರತಿ ಶಾಲೆಯಲ್ಲಿ ವಿಜ್ಞಾನಿಗಳನ್ನು ಹುಟ್ಟು ಹಾಕಬೇಕು ಎಂದು ವಿಜ್ಞಾನ ವಿಷಯ ಪರಿವೀಕ್ಷಕ ಎಚ್. ನಾಗೇಂದ್ರಪ್ಪ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ
ವತಿಯಿಂದ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವೇಷಣೆಗಳ ಬಳಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ವಿಷಯಗಳಲ್ಲಿ ಗಮನ ಸೆಳೆಯುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಲು ಅವಕಾಶವಿದೆ. ದೇಶಕ್ಕೆ ಅಪಾರ ಕೊಡುಗೆ ನೀಡುವ ಉದ್ದೇಶ ಹೊಂದಿ ಉತ್ತಮ ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಬೇಕೆಂದರು.
ಗ್ರಾಮಾಂತರ ಪ್ರದೇಶದಲ್ಲಿ ವಿಜ್ಞಾನದ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ವೈಜ್ಞಾನಿಕ ಯುಗದಲ್ಲಿ ವಿಜ್ಞಾನ ವಿಷಯಕ್ಕಿರುವ ಮಹತ್ವದ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು. ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡುವುದರಿಂದ ಉನ್ನತ ಹುದ್ದೆಗಳನ್ನು ಸುಲಭವಾಗಿ ಪಡೆಯಬಹುದು. ಅಲ್ಲದೆ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಮಾರ್ಗದರ್ಶನ ಮಾಡಬೇಕಾಗಿದೆ. ಶಿಕ್ಷಕರ ಶ್ರಮದಿಂದ
ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಸಂಶೋಧನೆಗೆ ನಾನಾ ಮಾರ್ಗಗಳಿವೆ. ಕೃಷಿ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಹೊಸ ವಿಷಯಗಳಲ್ಲಿ ಸಂಶೋಧನೆ ಮಾಡಬೇಕು. ಇದರಿಂದ ದೇಶಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದಂತಾಗಲಿದೆ ಎಂದು ಹೇಳಿದರು. ವಿಜ್ಞಾನ ಶಿಕ್ಷಕ ಎಚ್. ಮಂಜುನಾಥ್ ಮಾತನಾಡಿ, ನಾವು ಗ್ರಾಮೀಣ ಮಕ್ಕಳು, ನಮಗೆ ಆಂಗ್ಲ ಭಾಷೆ ತಿಳಿಯುವುದಿಲ್ಲ, ಏನು ಮಾಡಬೇಕೆಂದು ಭಯ ಮಕ್ಕಳಲ್ಲಿ ಬೇಡ. ಕನ್ನಡ ಭಾಷೆಯಲ್ಲೇ ಮಾದರಿ ತಯಾರಿಸಿ. ಅದನ್ನು ಆಂಗ್ಲ ಮಾಧ್ಯದಲ್ಲಿ ಅನುವಾದ ಮಾಡಲಾಗುವುದು ಎಂದರು.
ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಖಜಾಂಚಿ ಕೆ.ವಿ. ನಾಗಲಿಂಗ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ, ಜಿಲ್ಲಾ ಶೈಕ್ಷಣಿಕ ಸಮನ್ವಯಾ ಧಿಕಾರಿ ಎ.ಎನ್. ಚಂದ್ರಪ್ಪ, ಜಿಲ್ಲಾ ಸಮನ್ವಯಾಧಿ ಕಾರಿ ಟಿ. ಹನುಮಂತಪ್ಪ, ತೀರ್ಪುಗಾರ ಸುರೇಶ್ ಮತ್ತಿತರರು ಇದ್ದರು.
ರಾಜ್ಯದ 32 ಶೈಕ್ಷಣಿಕ ಜಿಲ್ಲೆಯಿಂದ ತಲಾ 10 ತಂಡಗಳಂತೆ ಒಟ್ಟು 320 ತಂಡಗಳನ್ನು ವಿಜ್ಞಾನ ಸಮಾವೇಶಕ್ಕೆ
ಕಳುಹಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಗೆ 21 ತಂಡಗಳು ಆಗಮಿಸಿದ್ದು, ಇದರಲ್ಲಿ 10 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
ಎಚ್. ಮಂಜುನಾಥ್, ವಿಜ್ಞಾನ ಶಿಕ್ಷಕ.