ಜೆರುಸೆಲಮ್: ಹೊಸ ಕೊರೊನಾ ವೈರಸ್ COVID-19 ಗೆ ಲಸಿಕೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ್ದೇವೆ ಎಂದು ಇಸ್ರೇಲ್ ವಿಜ್ಞಾನಿಗಳು ಪ್ರಕಟಿಸುವ ಸಾಧ್ಯತೆ ಇದೆ.ಇಸ್ರೇಲ್‌ನ ಇನ್‌ಸ್ಟಿಟೂಟ್ ಫಾರ್ ಬಯಾಲಜಿಕಲ್ ರಿಸರ್ಚ್‌ನ ವಿಜ್ಞಾನಿಗಳು ಕೊರೊನಾ ವೈರಸ್ ಅಂದರೆ COVID-19ಗೆ ಲಸಿಕೆ ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದ್ದು, ಶೀಘ್ರವೇ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಸರಕಾರ ದೇಶದ ವಿಜ್ಞಾನಿಗಳು ಕೊರೊನಾ ವೈರಸ್‌ನ ಗುಣ ಹಾಗೂ ಜೈವಿಕ ತಂತ್ರವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವೈರಸ್ ನ ಪ್ರತಿರೋಧಕ ಇನ್ನೂ ಸಿದ್ಧಪಡಿಸಲಾಗಿಲ್ಲ ಎಂದಿದ್ದಾರೆ. ಸಂಸ್ಥೆಯ ಸುಮಾರು 50ಕ್ಕೂ ಅಧಿಕ ನುರಿತ ವಿಜ್ಞಾನಿಗಳು ಈಗಾಗಲೇ ಈ ವೈರಸ್ ನ ವಿರುದ್ಧ ಹೋರಾಡುವ ಲಸಿಕೆಯನ್ನು ತಯಾರಿಸುತ್ತಿದ್ದಾರೆ.
ಕೊರೊನಾ ವೈರಸ್‌ಗೆ ಲಸಿಕೆ ಸಿದ್ಧವಾದ ಬಳಿಕ ಅದರ ಟ್ರೈಯಲ್ ಪ್ರಕ್ರಿಯೆ ನಡೆಯಲಿದೆ. ಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ಪರೀಕ್ಷಿಸಲಾಗುತ್ತದೆ. ಈ ವೇಳೆ ವ್ಯಾಕ್ಸಿನ್‌ನ ಗುಣ ಹಾಗೂ ಅದರ ಸೈಡ್ ಎಫೆಕ್ಟ್ ಗಳ ಕುರಿತೂ ಅಧ್ಯಯನ ನಡೆಯಲಿವೆ. ಈ ಪ್ರಕ್ರಿಯೆಗಳಿಗೆ ಕೆಲವು ತಿಂಗಳುಗಳು ಹಿಡಿಯುವ ಸಾಧ್ಯತೆ ಇದೆ. ಬಳಿಕ ಈ ಲಸಿಕೆಗೆ ಮಂಜೂರಾತಿ ಪಡೆಯಲು ಅಮೆರಿಕದ ಫುಡ್ ಅಂಡ್ ಅಡ್ಮಿನಿಸ್ಟ್ರೇಷನ್ (FDA) ಹಾಗೂ ಚೀನಾದ ಔಷಧಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಲಸಿಕೆಗೆ ಮಂಜೂರಾತಿ ಲಭಿಸಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಇದಕ್ಕೆ ಅನುಮತಿ ನೀಡಲಿದೆ.
ಮಧ್ಯ ಇಸ್ರೇಲ್ ಪಟ್ಟಣವಾದ ನೆಸ್ ಟಿಯೋನಾದಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ ಅನ್ನು 1952ರಲ್ಲಿ ಇಸ್ರೇಲ್ ರಕ್ಷಣಾ ಪಡೆಗಳ ವಿಜ್ಞಾನ ದಳದ ಭಾಗವಾಗಿ ಸ್ಥಾಪಿಸಲಾಯಿತು. ಇದು ತಾಂತ್ರಿಕವಾಗಿ ಪ್ರಧಾನ ಮಂತ್ರಿ ಕಚೇರಿಯ ಮೇಲ್ವಿಚಾರಣೆಯಲ್ಲಿದೆ. ಫೆಬ್ರವರಿ 1ರಂದು ಕೋವಿಡ್ -19ಗೆ ಲಸಿಕೆ ಅಭಿವೃದ್ಧಿಪಡಿಸಲು ಸಂಪನ್ಮೂಲಗಳನ್ನು ವಿನಿಯೋಗಿಸಲು ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಸಂಸ್ಥೆಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಜಪಾನ್, ಇಟಲಿ ಮತ್ತು ಇತರ ದೇಶಗಳಿಂದ ಐದು ವಿಧದ ವೈರಸ್ ಮಾದರಿಗಳು ಇಲ್ಲಿಗೆ ಬಂದಿವೆ.