Advertisement

Space: ಬಾಹ್ಯಾಕಾಶದಿಂದ ಚಿಮ್ಮಿದ ಕಣದ ಶಕ್ತಿ ನೋಡಿ ವಿಜ್ಞಾನಿಗಳಿಗೆ ಅಚ್ಚರಿ!

09:58 PM Nov 24, 2023 | Team Udayavani |

ನವದೆಹಲಿ: ಅಮೆರಿಕದ ಉಟಾಹ್‌ ರಾಜ್ಯದ ಪಶ್ಚಿಮ ಮರುಭೂಮಿಯಲ್ಲಿನ ಕಾಸ್ಮಿಕ್‌ ಕಿರಣಗಳ ವೀಕ್ಷಣಾಲಯ (ಅರೇ ದೂರದರ್ಶಕ) 2021, ಮೇ 27ರಂದು ವಿಜ್ಞಾನಿಗಳು ಒಂದು ಬ್ರಹ್ಮಕಿರಣವನ್ನು (ಕಾಸ್ಮಿಕ್‌ ರೇ) ಪತ್ತೆಹಚ್ಚಿದ್ದರು. ಅದರಲ್ಲಿ ಪತ್ತೆಯಾಗಿರುವ ಒಂದು ಪರಮಾಣುವಿನ ವಿಸ್ಮಯಕಾರಿ ಶಕ್ತಿ, ಈಗ ಖಗೋಳಶಾಸ್ತ್ರಜ್ಞರು ಮತ್ತು ಭೌತಶಾಸ್ತ್ರಜ್ಞರ ಅಚ್ಚರಿಗೆ ಕಾರಣವಾಗಿದೆ.

Advertisement

ಹೊಸತಾಗಿ ಪತ್ತೆಯಾಗಿರುವ ಕಣವನ್ನು ಅಮತೆರಸು ಎಂದು ಕರೆಯಲಾಗಿದೆ. ಇದರಲ್ಲಡಗಿರುವ ಶಕ್ತಿಯನ್ನು ಕಂಡು ವಿಜ್ಞಾನಿಗಳೇ ದಂಗಾಗಿದ್ದಾರೆ. 244 ಎಕ್ಸಾ ಎಲೆಕ್ಟ್ರಾನ್‌ ವೋಲ್ಟ್ನಷ್ಟು ಶಕ್ತಿ ಈ ಒಂದೇ ಒಂದು ಕಣದಲ್ಲಿದೆ. ಇದನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ, ಇದುವರೆಗೆ ಮನುಷ್ಯ ಜನಾಂಗದ ಇತಿಹಾಸದಲ್ಲೇ ಕಂಡುಬರುವ ಗರಿಷ್ಠ ಶಕ್ತಿಯುತ ಕಣಕ್ಕಿಂತ 10 ಲಕ್ಷ ಪಟ್ಟು ಅಧಿಕ ಶಕ್ತಿ ಇದರಲ್ಲಿದೆ!

ಭಾರತದ ಪುರಾಣಗಳಲ್ಲಿ ಸೂರ್ಯದೇವನ ಪತ್ನಿ ಸಂಧ್ಯಾದೇವಿಯ ಉಲ್ಲೇಖ ಬರುತ್ತದೆ. ಅದೇ ರೀತಿ ಜಪಾನಿನ ಪುರಾಣದಲ್ಲೂ ಸೂರ್ಯ ದೇವಿಯೊಬ್ಬಳಿದ್ದಾಳೆ, ಆಕೆಯ ಹೆಸರು ಅಮೆತೆರಸು. ಆ ಹೆಸರನ್ನೇ ಈ ಕಣಕ್ಕೆ ಇಡಲಾಗಿದೆ. ಇದಕ್ಕೂ ಹಿಂದೆ 1991ರಲ್ಲಿ ಒಂದು ಕಣ ಪತ್ತೆಯಾಗಿತ್ತು. ಅದನ್ನು ನೋಡಿ ವಿಜ್ಞಾನಿಗಳು “ಓ ಮೈ ಗಾಡ್‌’ ಎಂದಿದ್ದರು. ಅದು ಆ ಹೆಸರಿನಿಂದಲೇ ಜನಪ್ರಿಯವಾಗಿದೆ! ಅದಕ್ಕೂ ಮೊದಲು ಪತ್ತೆಯಾಗಿದ್ದ ಶಕ್ತಿಯುತ ಕಣವನ್ನು “ದೇವ ಕಣ'(ಗಾಡ್‌ ಪಾರ್ಟಿಕಲ್‌) ಎಂದು ಕರೆಯಲಾಗಿತ್ತು.

ಮೂಲವೇನು?:
ಇಂತಹ ಅತಿಮಾನುಷ, ಶಕ್ತಿಯುತ ಕಣಗಳ ಮೂಲವೇನು ಎಂದು ವಿಜ್ಞಾನಿಗಳಿಗೆ ಗೊತ್ತಾಗಿಲ್ಲ. ಉಟಾಹ್‌ ವಿಶ್ವವಿದ್ಯಾಲಯದ ಸಂಶೋಧಕ ಪ್ರೊಫೆಸರ್‌ ಜೇಮ್ಸ್‌ ಮ್ಯಾಥ್ಯೂಸ್‌ ಪ್ರಕಾರ, “ಇದು ಅತಿದೂರದ ಬಾಹ್ಯಾಕಾಶದಿಂದ ಬಂದಿದೆ. ಉಟಾಹ್‌ ಸಮೀಪ ಇಂತಹ ಶಕ್ತಿಯುತ ಕಣವನ್ನು ಸೃಷ್ಟಿಸುವ ಘಟನೆಗಳೇನೂ ನಡೆದಿಲ್ಲ. ಹೀಗಾಗಿ ಅತಿದೂರದ ಬಾಹ್ಯಾಕಾಶದಿಂದಲೇ ಬಂದಿರುತ್ತದೆ. ಬಹುಶ ಕ್ಷೀರಪಥದ ಗಡಿಯಲ್ಲಿರುವ ಖಾಲಿ ಜಾಗದಿಂದಲೇ ಹೊರಹೊಮ್ಮಿದ ಕಿರಣದಿಂದ ಚಿಮ್ಮಿರುವ ಕಣವಿದು. ನೀವೊಂದು ವೇಳೆ ಈ ಕಣದ ಮೂಲವನ್ನು ಹುಡುಕಿಹೊರಟರೂ, ಅಲ್ಲಿ ಅಂತಹ ದೊಡ್ಡ ಘಟನೆಗಳೇನು ಸಂಭವಿಸಿರುವುದು ಕಂಡುಬಂದಿಲ್ಲ. ಹೀಗಾಗಿ ಮೂಲದ ಬಗ್ಗೆ ಅಚ್ಚರಿಯಿದೆ’ ಎಂದಿದ್ದಾರೆ.

ಸಾಮಾನ್ಯವಾಗಿ ಬಾಹ್ಯಾಕಾಶದಲ್ಲಿ ನಕ್ಷತ್ರಗಳ ನಡುವೆ ಸಂಭವಿಸುವ ಬೃಹತ್‌ ಘಟನೆಗಳಿಂದ ಇಂತಹ ಶಕ್ತಿಯುತ ಕಣಗಳು ಹೊಮ್ಮುತ್ತವೆ. ಕಪ್ಪುಕುಳಿ ಸೃಷ್ಟಿಯಾದಾಗ, ಗಾಮ್ಮಾ ಕಿರಣಗಳು ಸ್ಫೋಟಿಸಿದಾಗ, ನ್ಯೂಟ್ರಾನ್‌ ನಕ್ಷತ್ರ ಪತನವಾದಾಗ ಇಂತಹ ಶಕ್ತಿಯುತ ಕಿರಣಗಳು ಉತ್ಪತ್ತಿಯಾಗುತ್ತವೆ. ಅದರಲ್ಲೇ ಇಂತಹ ಕಣಗಳಿರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next