ಬೆಂಗಳೂರು: “ಚಂದ್ರಯಾನ’ ಯೋಜನೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿಜ್ಞಾನಿ, ಪ್ರದ್ಮಶ್ರೀ ಪುರಸ್ಕೃತ ಡಾ.ಎಸ್.ಕೆ. ಶಿವಕುಮಾರ್ (65) ಶನಿವಾರ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಿಂಗಳಿಂದ ನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ ಪ್ರಾಧ್ಯಾಪಕಿ ಡಾ.ಗಿರಿಜಾ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಚಂದ್ರಯಾನ ಉಪಗ್ರಹಕ್ಕೆ ಪಥ ಮಾರ್ಗದರ್ಶನ, ಅದರ ನೆಲೆ ಗುರುತಿಸುವುದು, ಸರಿಯಾದ ಕಕ್ಷೆಗೆ ತೆರಳಲು ಸೂಕ್ತ ನಿರ್ದೇಶನ ನೀಡುವುದು ಸೇರಿ ಬಾಹ್ಯಾಕಾಶದ “ಡೀಪ್ ಸ್ಪೇಸ್ ಆ್ಯಂಟೆನಾ’ ಸ್ಥಾಪನೆಯಲ್ಲಿ ಡಾ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. 32 ಅಡಿ ಉದ್ದದ ಈ ಆ್ಯಂಟೆನಾ ಬ್ಯಾಲಾಳದಲ್ಲಿ ಇದ್ದು, ಅವರು ಇಸ್ರೋ ಟೆಲಿಮೆಟ್ರಿ ಮತ್ತು ಟ್ರ್ಯಾಕಿಂಗ್ ಸೆಂಟರ್ ನಿರ್ದೇಶಕರಾಗಿದ್ದಾಗ ಅದನ್ನು ನಿರ್ಮಿಸಲಾಗಿತ್ತು.
ಪತ್ರಿಕೋದ್ಯಮ ಶಿಕ್ಷಣ ಪಡೆದಿದ್ದ ಅವರು ಮೈಸೂರು ವಿವಿ ಪದವಿ ವ್ಯಾಸಂಗ ಪೂರೈಸಿದ್ದರು. ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ “ಫಿಸಿಕಲ್ ಎಂಜಿನಿಯರಿಂಗ್’ನಲ್ಲಿ ಎಂಟೆಕ್ ಶಿಕ್ಷಣ ಪಡೆದು, 1976ರಲ್ಲಿ ಇಸ್ರೋಗೆ ಸೇರಿದ್ದರು. ಅಲ್ಲಿಂದ ಇಸ್ರೋ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ, ಐಆರ್‌ಎಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಆ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಸಾಮಾನ್ಯರು, ಶಿಕ್ಷಣ ಕ್ಷೇತ್ರಕ್ಕೆ ತಲುಪಿಸುವ ಕೆಲಸ ಮಾಡಿದರು. ಜತೆಗೆ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ್ದರು ಎಂದು ವಿಜ್ಞಾನ ಲೇಖಕ ಹಾಲೊªಡ್ಡೇರಿ ಸುಧೀಂದ್ರ ಮೆಲುಕು ಹಾಕಿದರು.
ಶಿವಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗೆ 2010ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ನೀಡಲಾಗಿತ್ತು. ಮೃತರ ಅಂತ್ಯಕ್ರಿಯೆ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ನೆರವೇರಿತು.