Advertisement

ಸುಸ್ಥಿರ ಕೃಷಿ ಉತ್ತೇಜನಕ್ಕೆ ವೈಜ್ಞಾನಿಕ ಸ್ಪರ್ಶ

11:10 AM Feb 10, 2022 | Team Udayavani |

ಆಳಂದ: ಬೆಳೆಗೆ ದುಂದುವೆಚ್ಚ ತಪ್ಪಿಸುವುದು, ಅನಾವಶ್ಯಕ ಕೀಟನಾಶಕ, ಬೇಡವಾದ ಗೊಬ್ಬರ ಬಳಕೆ ತಡೆದು ವೈಜ್ಞಾನಿಕ ಬೆಳೆ ನಿರ್ವಹಣೆಗೆ ರೈತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರವು (ಕೆವಿಕೆ) ಕಳೆದ ಐದು ವರ್ಷದಿಂದ ರೈತರ ಹೊಲಗಳನ್ನೇ ಆಯ್ಕೆಮಾಡಿಕೊಂಡು ಹಂಗಾಮಿಗೆ ಅನುಸಾರವಾಗಿ ರೈತರ ಕ್ಷೇತ್ರ ಪಾಠ ಶಾಲೆ ನಡೆಸುವ ಮೂಲಕ ಕೃಷಿಯ ಉತ್ತೇಜನಕ್ಕೆ ವೈಜ್ಞಾನಿಕ ಸ್ಪರ್ಶ ನೀಡಿದೆ.

Advertisement

ಏನಿದು ರೈತರ ಕ್ಷೇತ್ರ ಪಾಠಶಾಲೆ

ಕಳೆದ ಐದು ವರ್ಷದಿಂದಲೂ ಕೆವಿಕೆ ಜಿಲ್ಲೆಯ ರೈತರೊಬ್ಬರ ಹೊಲ, ಬೇರೆಬೇರೆ ಬೆಳೆ ಹಂಗಾಮಿಗೆ ಪ್ರತಿಬಾರಿ 25 ರೈತರ ಉಚಿತ ಪ್ರವೇಶ ನೀಡಿ, ಬಿತ್ತನೆ ಪೂರ್ವ ಮಣ್ಣು ಪರೀಕ್ಷೆ, ಬೀಜ ಆಯ್ಕೆ, ನಂತರ ಬಿತ್ತನೆಯಿಂದ ಕೊಯ್ಲಿನ ವರೆಗೆ ವಾರಕ್ಕೊಮ್ಮೆ ಆಯ್ಕೆಮಾಡಿದ ರೈತರ ಹೊಲದ ಪಾಠಶಾಲೆಯಲ್ಲೇ ತರಗತಿ ನಡೆಸಿ, ಸಮವಸ್ತ್ರ, ಕ್ಯಾಪ್‌, ಲೆನ್ಸ್‌, ಬೆಳೆಯಲ್ಲಿನ ಹುಳ ಸಂಗ್ರಹಿಸಲು ಬಾಟಲಿ, ಸ್ಕೆಚ್‌ಪೆನ್‌, ನೋಟಬುಕ್‌ ಹೀಗೆ ಶಾಲೆ ಕಲಿಯಲು ಬೇಕಾದ ಎಲ್ಲ ಸಾಮಗ್ರಿ ನೀಡಲಾಗುತ್ತದೆ. ಜತೆಗೆ ಪ್ರವೇಶ ಪಡೆದ ರೈತರ ಹಾಜರಾತಿ ಕಡ್ಡಾಯಗೊಳಿಸಿದ್ದು, ಬಿತ್ತನೆಯಿಂದ ಬೆಳೆ ಕಟಾವು ವರೆಗೆ ತರಬೇತಿ ಪಡೆಯುವ 25 ಮಂದಿ ವಿದ್ಯಾರ್ಥಿಗಳಂತೆ ಪ್ರತಿವಾರ ಆಯ್ಕೆ ಮಾಡಿದ ಹೊಲಕ್ಕೆ ಬಂದು ಬೆಳೆಯಲ್ಲಿನ ಬದಲಾವಣೆ ಕಂಡು ಹಿಡಿದು ಕಾಲಕಾಲಕ್ಕೆ ವಿಜ್ಞಾನ ಕೇಂದ್ರಕ್ಕೆ ಹೋಗಿ ವಿಜ್ಞಾನಿಗಳಿಗೆ ಮಾಹಿತಿ ನೀಡುತ್ತಾರೆ.

ರೋಗ, ಕೀಟ. ಬೆಳೆ ಬದಲಾವಣೆ, ಹವಾಮಾನ ವೈಪರೀತ್ಯದ ಬಗ್ಗೆ ಈ 25 ಮಂದಿ ಒಟ್ಟಾಗಿ ಚರ್ಚಿಸಿ ಅಂತಿಮವಾಗಿ ನಿರ್ಧರಿಸಿ ವಿಜ್ಞಾನಿಗಳಿಗೆ ಮಾಹಿತಿ ನೀಡುತ್ತಾರೆ. ಬೆಳೆದ ನೂರು ಕಾಳಿನ ತೂಕ ಎಷ್ಟಿದೆ. ಯಾವ ತೇವಾಂಶದಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬೇಕು. ಬಿತ್ತನೆಗೆ ಯಾವ ರೀತಿ ಬೀಜ ಆಯ್ಕೆಮಾಡಬೇಕು. ಇದರಲ್ಲಿ ಯಾವ ಗುಣ ಧರ್ಮಗಳಿರಬೇಕು ಎಂಬುದನ್ನು ಕಲಿಸಿಕೊಡಲಾಗುತ್ತಿದೆ.

ಈಗಾಗಲೇ ಚಿಂಚೋಳಿ ತಾಲೂಕು ಸುಲ್ತಾನದಲ್ಲಿ ತೊಗರಿ, ಶ್ರೀನಿವಾಸ ಸರಡಗಿಯಲ್ಲಿ ತೊಗರಿ, ಅಫಜಲಪುರ ತಾಲೂಕು ಗೌಡಗಾಂವದಲ್ಲಿ ಜೋಳ, ತಾಲೂಕಿನ ಬೆಳಮಗಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆದು ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಸುಂಟನೂರಲ್ಲಿ ಕಡಲೆ ಬೆಳೆ ರೈತರ ಕ್ಷೇತ್ರ ಪಾಠಶಾಲೆ ನಡೆಸಿ ಅವರನ್ನು ಸ್ವಯಂ ಬೆಳೆ ನಿರ್ವಹಣೆಗೆ ಸಜ್ಜುಗೊಳಿಸಲಾಗುತ್ತಿದೆ.

Advertisement

ಕಡಲೆ ಕ್ಷೇತ್ರ ಆಯ್ಕೆ

ತಾಲೂಕಿನ ಸುಂಟನೂರ ಗ್ರಾಮದ ಬಾಬುರಾವ್‌ ಅವರ ಹೊಲದಲ್ಲಿ ಈ ಬಾರಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರ ಕೈಗೆತ್ತಿಕೊಂಡ ಕಡಲೆ ಬೆಳೆ ಬಿತ್ತನೆಯಿಂದ ಕೋಯ್ಲಿನ ವರೆಗೆ ವಾರಕ್ಕೊಮ್ಮೆ 10 ಬಾರಿ ಕ್ಷೇತ್ರ ಪಾಠಶಾಲೆ ನಡೆಸಿ ರೈತರಿಗೆ ವೈಜ್ಞಾನಿಕ ಬೇಸಾಯದ ಪದ್ಧತಿ ಕುರಿತು ತರಬೇತಿ ನೀಡಿತು. ಕಡಲೆ ಬಿತ್ತನೆಯಿಂದ ಹಿಡಿದು ಇದರ ಕೊಯ್ಲುವರೆಗೆ ಕ್ಷೇತ್ರಪಾಠಶಾಲೆ ನಡೆಸುವ ಕಾರ್ಯಕ್ಕೆ ಕೆವಿಕೆ ಕಾರ್ಯಕ್ರಮ ಸಂಯೋಜಕ, ಹಿರಿಯ ವಿಜ್ಞಾನಿ ಡಾ| ರಾಜು ತೆಗ್ಗಳಿ ಚಾಲನೆ ನೀಡಿದ್ದರು.

ಸುಂಟನೂರದಲ್ಲಿ ಪ್ರತಿ ಸೋಮವಾರದಂತೆ ಹೀಗೆ ಒಟ್ಟು 10 ವಾರ ಕಾಲ ಕಡಲೆ ಬೆಳೆಯ ವಿವಿಧ ಹಂತದ ವೈಜ್ಞಾನಿಕ ಮಾಹಿತಿ ನೀಡಲಾಯಿತು. ಮಣ್ಣು ಪರೀಕ್ಷೆ, ಬೀಜದ ಆಯ್ಕೆ, ತಳಿ ಗುಣ ಲಕ್ಷಣ, ಬೀಜೋಪಚಾರ, ಬೆಳೆಯ ಕುಡಿ ಚಿವುಟಿದ ಪಲ್ಯದ ಆರೋಗ್ಯದ ಉಪಯೋಗ, ಕಡಲೆ ಎಲೆ ಹೂವಿನಲ್ಲಿ ಹುಳಿ ಅಂಶ ಹವಾಮಾನ ಬದಲಾವಣೆಯಿಂದ ಬರುವ ಕೊಂಡಿ ಹುಳ, ಕಾಯಿ ಕೊರಕ, ನೆಟೆ ರೋಗ, ಇಟ್ಟಂಗಿ ತುಕ್ಕು ರೋಗ ನಿರ್ವಹಣೆ, ತೇವ ಕಡಿಮೆ ಆದಾಗ ಭೂಮಿ ಸೀಳುವ ಹಂತದಲ್ಲಿ ಬೆಳೆ ಮೇಲೆ ಆಗುವ ಪರಿಣಾಮ, ರಸಗೊಬ್ಬರ, ಪೋಷಣೆ, ಕೋಯ್ಲನಂತರ ಕಾಯಿ, ಕಾಳು ಸಂರಕ್ಷಣೆ, ಹೀಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು 10 ವಾರಗಳ ಕಾಲ ಕ್ಷೇತ್ರ ಪಾಠ ಶಾಲೆಯ ರೈತರ ಹೊಲದಲ್ಲೇ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಸೂಕ್ತ ಸಲಹೆ ನೀಡಿದರು. ಎಂಟನೇ ವಾರದ ತರಬೇತಿಯಲ್ಲಿ ಸಸ್ಯರೋಗ ವಿಜ್ಞಾನಿಗಳಾದ ಜಾಹಿರ್‌ ಅಹಮದ್‌, ಡಾ| ಶ್ರೀನಿವಾಸ, ಡಾ| ಇಸೂಫ್‌ ಅಲಿ ಸಮಗ್ರ ಮಾಹಿತಿ ಒದಗಿಸಿದರು. ಕ್ಷೇತ್ರ ಸಹಾಯಕ ಸೈದಪ್ಪ ನಾಟಿಕರ್‌, ನಿರಂಜನ ಧನ್ನಿ ಹಾಗೂ ರೈತ ಶಿಕ್ಷಣಾರ್ಥಿಗಳು, ನೆರೆ ಹೊರೆ ರೈತರು ಪಾಲ್ಗೊಂಡಿದ್ದರು.

ರೈತರ ಕ್ಷೇತ್ರ ಪಾಠಶಾಲೆ ಮೂಲಕ ಬೆಳೆಗೆ ಕಡಿಮೆ ಖರ್ಚು, ಹೆಚ್ಚಿನ ಉತ್ಪಾದನೆ, ತಾಂತ್ರಿಕ ನಿರ್ವಹಣೆ ಸಮಸ್ಯೆಗಳ ಅರಿತು ವೈಜ್ಞಾನಿಕ ಪದ್ಧತಿ ಅನುಭವ ಪಡೆದು ಇನ್ನೊಬ್ಬರಿಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ರೈತರ ಕ್ಷೇತ್ರ ಪಾಠಶಾಲೆ ಮೂಲಕ ಕೃಷಿಕರನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. -ಡಾ| ರಾಜು ತೆಗ್ಗಳ್ಳಿ, ಕೆವಿಕೆ ಕಾರ್ಯಕ್ರಮ ಸಂಯೋಜಕ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next