ಯಲಹಂಕ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಮುಖ್ಯವಾಗಿದೆ ಎಂದು ಬೆಂಗಳೂರಿನ ಜವಹರಲಾಲ್ ನೆಹರು ವೈಜ್ಞಾನಿಕ ಮತ್ತು ಸಂಶೋಧನಾ ಕೇಂದ್ರದ ಪ್ರೊ.ಚಂದ್ರಬಾಸ್ ನಾರಾಯಣ್ ಹೇಳಿದರು.
ಸಮೀಪದ ನಾಗಾರ್ಜುನ ವಿದ್ಯಾನಿಕೇತನ ಶಾಲೆಯಲ್ಲಿ “ಮ್ಯಾಗ್ನೊಪಸ್-2018′ ವಿಜ್ಞಾನ, ಕಲೆ, ಸಾಹಿತ್ಯ ಮೇಳ ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನ ಪ್ರಗತಿಗೆ ವೈಚಾರಿಕತೆಯಿಂದ ಕೂಡಿದ ವಿಜ್ಞಾನದ ಚಿಂತನೆಗಳು ಅತ್ಯಗತ್ಯ ಎಂದರು.
ಮೇಳದಲ್ಲಿ ಮಕ್ಕಳು, ನೀರಿನ ಮಿತ ಬಳಕೆ, ತ್ಯಾಜ್ಯ ಮರುಬಳಕೆಯಿಂದ ವಿದ್ಯುತ್ ತಯಾರಿಸುವಿಕೆ ಹಾಗೂ ಇತರ ವಿಜ್ಞಾನ ಪ್ರಯೋಗಗಳು, ಭಾರತೀಯ ಹಬ್ಬಗಳ ಆಚರಣೆಯ ವೈಜ್ಞಾನಿಕ ಹಿನ್ನೆಲೆ ಮತ್ತು ವಿಜ್ಞಾನದ ಮಹತ್ವ, ಪರಿಸರ ಸಂರಕ್ಷಣೆ ಸೂತ್ರಗಳು, ಭಾಷೆಗಳೆಲ್ಲ ಒಂದೇ ಎಂದು ಬಿಂಬಿಸುವ “ಭಾಷಾಯಾನ’, ಹಂಪಿ ದರ್ಶನ,
ಸಂಗೀತ-ಯೋಗ-ನೃತ್ಯಗಳ ಸಮ್ಮಿಲನ ಸೇರಿದಂತೆ ಹತ್ತು ಹಲವು ಪ್ರಯೋಗ ಪ್ರರ್ಶನಗಳು ಗಮನಸೆಳೆದವು. ಜತೆಗೆ ಖಾದ್ಯಗಳ ಮೇಳ ಬಾಯಲ್ಲಿ ನೀರೂರಿಸಿತು. ಇದೇ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನಿರ್ದೇಶಿಸಿ, ನಿರ್ಮಿಸಿದ “ಅನಾಮಿಕ’ ಕಿರು ಚಿತ್ರ ಪ್ರದರ್ಶಿಸಿ, ಸಂಗ್ರಹವಾದ ಹಣವನ್ನು ಅನಾಥಾಲಯಕ್ಕೆ ನೀಡಲಾಯಿತು.
ನಾಗಾರ್ಜುನ ಸಂಸ್ಥೆಯ ಜೆ.ವಿ.ರಂಗರಾಜು, ಶ್ರೀದೇವಿ ರಂಗರಾಜು, ಸೌಜನ್ಯ, ಡಾ.ದೇಶಿಕಾಚಾರ್, ಜಿ.ಗೋಪಾಲಕೃಷ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ, ಶೋಭಾ ಭಟ್, ಲೀನಾ ಬಿ.ಎಚ್. ಡಾ.ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.