Advertisement

ವಿಜ್ಞಾನ ದೇಶದ ಶಾಂತಿಗೆ ಬಳಕೆಯಾಗಲಿ, ಕ್ರಾಂತಿಗಲ್ಲ

06:32 PM Mar 20, 2021 | Team Udayavani |

ಬೀದರ: ವಿಶ್ವದಲ್ಲಿ ಪ್ರಸ್ತುತ ವಿಜ್ಞಾನವನ್ನು ಶಾಂತಿಗಾಗಿ ಬಳಸದೆ, ಕ್ರಾಂತಿಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ವಿಜ್ಞಾನದಿಂದ ದೇಶ, ವಿಶ್ವ ಅಭಿವೃದ್ಧಿಯಾಗಬೇಕು ಎಂದು ಸಿ.ವಿ. ರಾಮನ್‌ ಪ್ರಶಸ್ತಿ ಪುರಸ್ಕೃತರು, ಹಿರಿಯ ವಿಜ್ಞಾನಿ ಡಾ| ಎಂ.ಎಸ್‌. ಜೋಗದ ಸಲಹೆ ನೀಡಿದರು.

Advertisement

ನಗರದ ರಂಗ ಮಂದಿರದಲ್ಲಿ ರಾಜ್ಯ ವಿಜ್ಞಾನ ಪರಿಷತ್‌, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 13ನೇ ಅಖೀಲ ಕರ್ನಾಟಕ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳಲ್ಲಿ ವಿಜ್ಞಾನ ಸಮ್ಮಿಳಿತವಾಗಿದೆ. ಬಸವಾದಿ ಶರಣರು ತಮ್ಮ ವಚನಗಳಲ್ಲಿ ವೈಜ್ಞಾನಿಕ ಸಿದ್ಧಾಂತ ತಿಳಿಸಿದ್ದಾರೆ. ಆದರೆ, ಶರಣರು ವಿಜ್ಞಾನವನ್ನು ಶಾಂತಿಗಾಗಿ ಬಳಸಿಕೊಂಡಿದ್ದು ಗಮನಾರ್ಹ ಎಂದರು.

ವಿಜ್ಞಾನ ಅದು ಹರಿಯುವ ನೀರು. ಹಿಂದಿನ ವಿಜ್ಞಾನವನ್ನು ಇಂದಿನ ಆಧುನಿಕ ವಿಜ್ಞಾನದೊಂದಿಗೆ ಸಮ್ಮಿಲನ ಮಾಡಿ ಶಿಕ್ಷಕರು ಮಕ್ಕಳಿಗೆ ಬೋಧಿ ಸಬೇಕು. ವಿಜ್ಞಾನ ಎಂದರೆ ಸತ್ಯ. ಈ ಸತ್ಯ ಘಟನೆಯನ್ನು ಗುರುಗಳು ತಮ್ಮ ವಿದ್ಯಾರ್ಥಿಗಳ ಹೃದಯಕ್ಕೆ ಸ್ಪರ್ಶಿಸುವಂತೆ ಬೋಧಿಸಬೇಕು. ವಿಜ್ಞಾನದ ಬಗ್ಗೆ ಧನಾತ್ಮಕ ಚಿಂತನೆ ಮಾಡಬೇಕು. ವಿಜ್ಞಾನದ ಜೊತೆಗೆ ಮಕ್ಕಳಿಗೆ ದೇಶಭಕ್ತಿ, ರಾಷ್ಟ್ರಪ್ರಜ್ಞೆ ಮತ್ತು ದೇಶಾಭಿವೃದ್ಧಿ ಬಗ್ಗೆ ತಿಳಿಸಿದಾಗ ಮಾತ್ರ ವಿಜ್ಞಾನ ಬೋಧನೆ
ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮೈಸೂರು ಸ್ವಾಮಿ ವಿವೇಕಾನಂದ ಯೂತ್ ‌ ಮೆಮೋರಿಯಲ್‌ನ ಸಿಇಒ ಪ್ರವೀಣಕುಮಾರ ಎಸ್‌. ಮಾತನಾಡಿ, ವಿಜ್ಞಾನ ಬೋಧನೆ ಹೃದಯದಿಂದ ಬರಬೇಕೇ ವಿನಃ ಯಾವುದೇ ವಸ್ತುವಿನಿಂದಲ್ಲ. ವಿಜ್ಞಾನ ಪರಿಷತ್‌ ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ನಿರಂತರ ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ವಿಜ್ಞಾನದ ಕುರಿತು ಜಾಗೃತಿ ಮೂಡಿಸುವುದು, ನಿರಂತರ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಪರಿಷತ್ತಿನ ಕಾರ್ಯ ಪ್ರಶಂಸನೀಯ ಎಂದರು.

ಶಾಹೀನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ್‌, ಕೆಆರ್‌ಇ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ ಜಿ. ಪಾಟೀಲ, ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೆವಾಡ್‌, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಮಹಾರುದ್ರಪ್ಪ ಆಣದೂರೆ ಮಾತನಾಡಿದರು. ಸಮಿತಿ ಸದಸ್ಯ ಪ್ರಕಾಶ ಲಕಶೆಟ್ಟಿ ಸ್ವಾಗತಿಸಿದರು. ಸಾಹಿತಿ ಶೈಲಜಾ ಹುಡಗೆ ನಿರೂಪಿಸಿದರು. ಸದಸ್ಯ ಬಾಬುರಾವ್‌ ದಾನಿ ವಂದಿಸಿದರು. ಮಾನಸ ಪಾಂಚಾಳ ಹಾಗೂ ಸಂಗಡಿಗರು ವಿಜ್ಞಾನ ಗೀತೆ ಮತ್ತು ನಾಟ್ಯಶ್ರೀ ನೃತ್ಯಾಲಯದಿಂದ ಭರತನಾಟ್ಯ ನೆರವೇರಿತು.

Advertisement

ಹೈ.ಕ ಶಿಕ್ಷಣ ಸಂಸ್ಥೆ ಸದಸ್ಯ ಡಾ| ರಜನೀಶ ವಾಲಿ, ಪ್ರಮುಖರಾದ ಪಾಂಡುರಂಗ ಬೆಲ್ದಾರ, ದೇವಿಪ್ರಸಾದ ಕಲಾಲ್‌, ಸಂಜೀವಕುಮಾರ ಸ್ವಾಮಿ, ಮಂಜುನಾಥ ಬೆಳಕೆರೆ, ಬಸವರಾಜ ದೇಶಮುಖ, ಗುಂಡಪ್ಪ ಹುಡಗೆ, ಸಂತೋಷ ಮಂಗಳೂರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next