ಕೆಂಗೇರಿ: ಕೇಂದ್ರ ವಿಜ್ಞಾನ ತಂತ್ರಜ್ಞಾನ ಇಲಾಖೆ ಹಾಗೂ ವಿಕ್ರಂ ಸಾರಾಬಾಯ್ ಸಮುದಾಯ ಜ್ಞಾನ ಕೇಂದ್ರ ಸಹಯೋಗದಲ್ಲಿ ಕೆಂಗೇರಿಯ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿರುವ ಮೂರು ದಿನಗಳ ವಿಜ್ಞಾನ ಎಕ್ಸ್‌ಪ್ರೆಸ್ ವಸ್ತುಪ್ರದರ್ಶನಕ್ಕೆ ಶನಿವಾರ ವಿದ್ಯಾರ್ಥಿಗಳಿಂದ ಭಾರಿ ಸ್ಪಂದೆನೆ ಸಿಕ್ಕಿತು.
ವಸ್ತುಪ್ರದರ್ಶನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಗರದ ಬಹುತೇಕ ಶಾಲಾ ವಿದ್ಯಾರ್ಥಿಗಳು ಆಗಮಿಸಿ ಬಾಹ್ಯಕಾಶ, ವಿಜ್ಞಾನ ಸೇರಿದಂತೆ ಅನೇಕ ಸಂಗತಿಗಳ ಕುರಿತು ಚಿತ್ರಮಾದರಿ ವೀಕ್ಷಿಸಿದರು. ಭವಿಷ್ಯದ ಸವಾಲುಗಳ ಬಗ್ಗೆ ಮಾಹಿತಿ ಪಡೆದರು. ತಾಪಮಾನ ಏರಿಕೆ, ಸೋಲಾರ್ ಶಕ್ತಿ ಬಳಕೆ, ಮಳೆ ವ್ಯತ್ಯಯ, ಇನ್ನೂ ಮುಂತಾದ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುವ ವಿಚಾರಗಳು ವಿಜ್ಞಾನ ಎಕ್ಸ್‌ಪ್ರೆಸ್‌ನ ವಸ್ತುಪ್ರದರ್ಶನದಲ್ಲಿದ್ದವು.
ವಸ್ತುಪ್ರದರ್ಶನ ವೀಕ್ಷಣೆಗಾಗಿ ವಿದ್ಯಾರ್ಥಿಗಳನ್ನು ಕರೆತಂದಿದ್ದ ವಾಹನಗಳಿಂದಾಗಿ ಕೆಂಗೇರಿ ಹೊರ ವರ್ತುಲ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ವಸ್ತುಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಬಂದಿದ್ದರಿಂದ, ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ವೀಕ್ಷಣೆಗೆ ಅಡಚಣೆಯುಂಟಾಗಿ ಕೆಲಕಾಲ ಗೊಂದಲದ ವಾತಾವರಣವೂ ಸೃಷ್ಟಿಯಾಗಿತ್ತು.
ಶಿಕ್ಷಕರ ಅಳಲು: ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ವಸ್ತುಪ್ರದರ್ಶನ ವೀಕ್ಷಿಸಲು ಬರುವ ನಿರೀಕ್ಷೆ ಇದ್ದರೂ ಆಯೋಜಕರು ಮುಂಜಾಗ್ರತೆ ವಹಿಸಿಲ್ಲ. ಕನಿಷ್ಠ ಸೌಲಭ್ಯಗಳನ್ನು (ನೀರು, ಆಹಾರ, ಶೌಚಾಲಯ)ಒದಗಿಸದಿರುವುದರಿಂದ ವಿದ್ಯಾರ್ಥಿಗಳು ಭವಣೆಪಡುವಂತಾಗಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಸ್.ಟಿ. ಸೋಮಶೇಖರ್, ಸಮಸ್ಯೆಗಳ ಕುರಿತು ಪರಿಶೀಲನೆ ನೆಡೆಸಿ ಭಾನುವಾರ ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪೋಲೀಸ್ ಬಂದೋಬಸ್ತ್ ಒದಗಿಸುವಂತೆಯೂ ತಾಕೀತು ಮಾಡಿದರು.