Advertisement

ಮುಂದಿನ ವರ್ಷದಿಂದ ಇಲಾಖೆ ವತಿಯಿಂದಲೇ ‘ವಿಜ್ಞಾನ ದಿನ’ ಆಚರಣೆ: ಸಚಿವ ಅಶ್ವತ್ಥನಾರಾಯಣ

02:40 PM Feb 25, 2022 | Team Udayavani |

ಬೆಂಗಳೂರು: ಮುಂದಿನ ವರ್ಷದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದಲೇ ರಾಜ್ಯದಾದ್ಯಂತ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಶುಕ್ರವಾರ ಏರ್ಪಡಿಸಿದ್ದ 29ನೇ ವರ್ಷದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯವು ಇಂದು ಗಳಿಸಿರುವ ಆರ್ಥಿಕ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ಅಗಾಧವಾಗಿದೆ ಎಂದರು.

ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಮೊದಲಿನಿಂದಲೂ ದೇಶದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ನೂರಾರು ವರ್ಷಗಳ ಹಿಂದೆಯೇ ರಾಜ್ಯದಲ್ಲಿ ಭದ್ರ ಬುನಾದಿ ಬಿದ್ದಿದೆ. ರಾಜ್ಯವು ಸಾಧಿಸಿರುವ ಸಾಮಾಜಿಕ ಸುಧಾರಣೆಗಳ ಹಿಂದೆಯೂ ತಂತ್ರಜ್ಞಾನದ ಕೊಡುಗೆ ಇದೆ ಎಂದು ಬಣ್ಣಿಸಿದರು.

ಬದುಕಿನ ಪ್ರತೀ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ. ಆದ್ದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನಗಳ ಬಗ್ಗೆ ಒಲವು ಮೂಡಿಸಬೇಕು. ಈಗ ಮಾನವಿಕಗಳ ಕಲಿಕೆಯಲ್ಲೂ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಏನನ್ನೇ ಕಲಿತರೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಜೊತೆಗೆ, ವಿಜ್ಞಾನವು ನಮ್ಮ ಸಂಸ್ಕೃತಿ ಮತ್ತು ಧರ್ಮಗಳ ಭಾಗವಾಗಬೇಕು ಎಂದು ಸಚಿವರು ಸಲಹೆ ನೀಡಿದರು.

ಇದನ್ನೂ ಓದಿ:ಶಾಸಕರಿಗೆ ವೇತನ ಪರಿಸ್ಕರಣೆ ಖಂಡನೀಯ: ಗಂಭೀರವಾಗಿ ಪರಿಗಣಿಸಲು ರಾಜ್ಯಪಾಲರಿಗೆ ಒತ್ತಾಯ

Advertisement

ಮಕ್ಕಳ ಕಲಿಕೆಯಲ್ಲಿ ಮೂರರಿಂದ ಹನ್ನೆರಡನೇ ವರ್ಷದವರೆಗೆ ನಿರ್ಣಾಯಕ ಹಂತವಾಗಿದೆ. ಈ ಹಂತದಲ್ಲೇ ಮಕ್ಕಳು ಶೇ.85ರಷ್ಟು ಕಲಿಕೆ ನಡೆಯುತ್ತದೆ. ಆದ್ದರಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈಜ್ಞಾನಿಕ ಕಲಿಕೆಗೆ ಒತ್ತು ಕೊಡಲಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ, ವಿಜ್ಞಾನಿ ಡಾ.ಅನುರಾಧಾ, ಕೆ.ವಿ.ಮಾಲಿನಿ, ಬಿ.ಎನ್. ಶ್ರೀನಾಥ್, ಶ್ರೀಮತಿ ಹರಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಬಾಲವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next