Advertisement

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಕೋರ್ಸ್‌ ಬೋಧನೆ : ತಜ್ಞರ ಜತೆ ಡಿಸಿಎಂ ಚರ್ಚೆ

09:21 PM Jun 10, 2021 | Team Udayavani |

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಹುಶಿಸ್ತೀಯ ಬೋಧನಾ ಕ್ರಮದಂತೆ  ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಬೋಧಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು  ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರ ಜತೆ ಗುರುವಾರ ಸಮಾಲೋಚನೆ ನಡೆಸಿದರು.

Advertisement

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್‌, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರೊಂದಿಗೆ ಡಿಸಿಎಂ ಮಹತ್ವದ ಚರ್ಚೆ ನಡೆಸಿದರು.

100 ಕಾಲೇಜುಗಳಲ್ಲಿ ಅವಕಾಶ

ರಾಜ್ಯದಲ್ಲಿ ಒಟ್ಟು 220 ಎಂಜಿನೀಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಒಂದು ನಿರ್ದಿಷ್ಟ ಕಾರ್ಯ ಚೌಕಟ್ಟು (ಕಾರ್ಯಸೂಚಿ) ರೂಪಿಸುವಂತೆ ಪ್ರೊ.ತಿಮ್ಮೇಗೌಡ ಅವರಿಗೆ ಡಿಸಿಎಂ ಸೂಚನೆ ನೀಡಿದರು.

ಸಾಧ್ಯವಾದರೆ, ಒಂದು ವಾರದಲ್ಲೇ ಕಾರ್ಯ ಚೌಕಟ್ಟಿನ ತಾತ್ಕಾಲಿಕ ವರದಿ ನೀಡಿ ಎಂದು ತಿಮ್ಮೇಗೌಡರಿಗೆ ಹೇಳಿದ ಡಿಸಿಎಂ, ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ಈ ವರ್ಷದಿಂದಲೇ ಈ ಕೋರ್ಸುಗಳನ್ನು ಬೋಧಿಸಲು ಸಾಧ್ಯವೇ? ಅದಕ್ಕೇನಾದರೂ ಕಾನೂನು ತೊಡಕುಗಳು ಇವೆಯೇ? ಎಂಬ ಅಂಶಗಳ ಬಗ್ಗೆ ಪರೀಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

Advertisement

ಒಂದು ವೇಳೆ ಎಂಜಿನೀಯರಿಂಗ್‌ ಕಾಲೇಜುಗಳಲ್ಲಿ ಮೂಲ ವಿಜ್ಞಾನ ಬೋಧಿಸಲು ಕಾನೂನು ತೊಡಕಿದ್ದರೆ ಸುಗ್ರೀವಾಜ್ಞೆ ಜಾರಿಗೆ ತರಬೇಕಾಗುತ್ತದೆ. ಗುಣಮಟ್ಟದ ವಿಜ್ಞಾನ ಬೋಧನೆಗೆ ಈ ಉಪ ಕ್ರಮ ಅತ್ಯಗತ್ಯ. ಗಣಿತ, ಅನ್ವಯಿಕ ವಿಜ್ಞಾನ ಸೇರಿ ಯಾವ ಕೋರ್ಸುಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆಯೂ ಡಿಸಿಎಂ ಮಾತುಕತೆ ನಡೆಸಿದರು.

ಅಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನವನ್ನು ಯಾವ ರೀತಿ ಬೋಧಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ. ಅದೇ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಕಲಿಕೆ ಆಗಬೇಕು ಹಾಗೂ ಹಾಲಿ ಇರುವ ಮೂಲ ಸೌಕರ್ಯದಿಂದಲೇ ಈ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವೇ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವಂತೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.

ಡಿಸಿಎಂ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರೊ.ಕರಿಸಿದ್ದಪ್ಪ ಹಾಗೂ ಗೋಪಾಲ ಜೋಷಿ ಆನ್‌ಲೈನ್‌ ಮೂಲಕ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next