Advertisement

ವಿಜ್ಞಾನ ದ್ವಿಭಾಷಾ ಪಠ್ಯ?- ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕನ್ನಡ-ಆಂಗ್ಲ ಭಾಷೆಯಲ್ಲಿ ವಿಜ್ಞಾನ

11:37 PM Oct 20, 2023 | Team Udayavani |

ಬೆಂಗಳೂರು: ಸರಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳಲು ಉತ್ತೇಜನ ನೀಡುವುದಕ್ಕಾಗಿ ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇರಿಸಿದ್ದು, ವಿಜ್ಞಾನ ಪಠ್ಯವನ್ನು ದ್ವಿಭಾಷೆಯಲ್ಲಿ ನೀಡುವ ಚಿಂತನೆ ನಡೆಸಿದೆ.

Advertisement

ಗ್ರಾಮೀಣ -ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಪದವಿಪೂರ್ವ ಹಂತದಲ್ಲಿ ವಿಜ್ಞಾನ ವಿಷಯವನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಯುವ ಸಂದರ್ಭ ಅದು ಸಂಪೂರ್ಣ ಅಪರಿಚಿತ ಎಂಬ ಭಾವನೆ ಉಂಟಾಗಬಹುದಾಗಿದ್ದು, ಅದನ್ನು ನಿವಾರಿಸಲು ಸರಕಾರ ಈ ವಿನೂತನ ಕ್ರಮಕ್ಕೆ ಮುಂದಾಗಿದೆ.

ಸವಾಲು ಎದುರಿಸಲು ಸಜ್ಜು
ಪಿಯುಸಿಯಲ್ಲಿ ಕಲೆ ಮತ್ತು ವಾಣಿಜ್ಯಗಳನ್ನು ಕನ್ನಡ ಮಾಧ್ಯಮದಲ್ಲಿ ಓದಲು ಅವಕಾಶವಿದೆ. ಆದರೆ ವಿಜ್ಞಾನಕ್ಕೆ ಹಾಗಿಲ್ಲ. ಇದರಿಂದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿ ಗಳು ತೊಂದರೆ ಅನುಭವಿಸುತ್ತಾರೆ. ಈ ಹಿನ್ನೆಲೆ ಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಸವಾಲಿಗೆ ಮಕ್ಕಳನ್ನು ಸಜ್ಜು ಗೊಳಿಸಲು ಪ್ರೌಢಶಾಲಾ ಮಟ್ಟದಲ್ಲೇ ಆಂಗ್ಲ ಭಾಷೆ ಯಲ್ಲಿಯೂ ವಿಜ್ಞಾನ ಪಾಠವನ್ನು ಪರಿಚಯಿಸಲು ಮುಂದಾಗಿದೆ.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ವಿಜ್ಞಾನ ಮತ್ತು ಗಣಿತಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಸರಿಸಮಾನವಾಗಿ ಫ‌ಲಿತಾಂಶ ಪಡೆಯುತ್ತಾರೆ. ಆದರೆ ಪಿಯುಸಿಯಲ್ಲಿ ಈ ಎರಡು ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆಯಲು ಪ್ರಯಾಸ ಪಡಬೇಕಾಗುತ್ತದೆ. ಇದರ ಜತೆಗೆ ಹಲವು ಪ್ರತಿಭಾನ್ವಿತರು ಆಂಗ್ಲ ಭಾಷೆಯ ಭಯದಿಂದ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಳ್ಳಲು ಹಿಂದೇಟು ಹಾಕುತ್ತಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ ಸರಕಾರ ದ್ವಿಭಾಷಾ ಪಠ್ಯಪುಸ್ತಕ ಹೊರತರುವ ಬಗ್ಗೆ ಚಿಂತನೆ ನಡೆಸಿದೆ.
ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ದ್ವಿ ಭಾಷಾ ಪಠ್ಯಪುಸ್ತಕ ಹೊರತರಬೇಕು ಎಂಬ ಅಭಿಪ್ರಾಯವಿದೆ. ಆದರೆ ಗಣಿತಕ್ಕಿಂತಲೂ ವಿಜ್ಞಾನ ದಲ್ಲಿ ಭಾಷೆಯ ಬಳಕೆ ಹೆಚ್ಚಿರುವುದರಿಂದ ಮೊದಲಿಗೆ ವಿಜ್ಞಾನ ಪಠ್ಯವನ್ನೇ ದ್ವಿಭಾಷೆಯಲ್ಲಿ ನೀಡುವುದು ಒಳಿತು. ಆ ಬಳಿಕ ಗಣಿತದ ದ್ವಿಭಾಷೆಯ ಬಗ್ಗೆ ತೀರ್ಮಾನ ಕೈಗೊಳ್ಳೋಣ. ಮುಂದಿನ ಶೈಕ್ಷಣಿಕ ವರ್ಷದಲ್ಲಿಯೇ ವಿಜ್ಞಾನ ಪಠ್ಯವನ್ನು ದ್ವಿಭಾಷೆಯಲ್ಲಿ ನೀಡುವ ಪ್ರಯತ್ನ ನಡೆಸಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಚರ್ಚೆ ನಡೆದಿದೆ.

ವಿದ್ಯಾರ್ಥಿಗಳಿಗೆ ಅನುಕೂಲವೇನು?
8ರಿಂದ 10ನೇ ತರಗತಿಯ ವಿಜ್ಞಾನ ಪಠ್ಯ ವನ್ನು ಆಂಗ್ಲ ಭಾಷೆಯಲ್ಲಿಯೂ ನೀಡಿದಾಗ ಮಕ್ಕಳಿಗೆ ವಿಜ್ಞಾನದ ಪರಿಕಲ್ಪನೆಗಳಿಗೆ ಆಂಗ್ಲ ಭಾಷೆ ಯಲ್ಲಿ ಏನು ಹೇಳುತ್ತಾರೆ ಎಂಬ ಪರಿ ಚಯ ವಾಗುತ್ತದೆ. ಇದರಿಂದ ಪಿಯುಸಿಯಲ್ಲಿ ಅವರಿಗೆ ಸುಲಭವಾಗುತ್ತದೆ.

Advertisement

ಗ್ರಾಮೀಣ ಪ್ರದೇಶದ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಅನು ಕೂಲಕ್ಕಾಗಿ ವಿಜ್ಞಾನದ ದ್ವಿಭಾಷಾ ಪಠ್ಯಪುಸ್ತಕ ಹೊರತರುವ ಚಿಂತನೆ ಇದೆ. ಎಸೆಸೆಲ್ಸಿ ಬಳಿಕ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನ ಸುಲಭವಾಗಲಿ ಎಂಬುದು ನಮ್ಮ ಉದ್ದೇಶ. ಇದಲ್ಲದೆ ವಿಜ್ಞಾನದ ನೂರಕ್ಕೂ ಹೆಚ್ಚು ಮೂಲ ಪರಿಕಲ್ಪನೆಗಳನ್ನು ಡಿಜಿಟಲೈಸ್‌ ಮಾಡುವುದಕ್ಕೆ ನಮ್ಮ ಅಧೀನದ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
– ಎನ್‌.ಎಸ್‌. ಬೋಸರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು

~ ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next