ಹೊಸದಿಲ್ಲಿ: “ಕೊರೊನಾ ಸೋಂಕು ಇದ್ದರೆ, ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ, ಶಾಲೆಯಲ್ಲಿ ಮಕ್ಕಳು ಊಟ ಹಂಚಿಕೊಳ್ಳುವಂತಿಲ್ಲ…’ ಹೀಗೆಂದು ಶಾಲೆಗಳಲ್ಲಿ ಕೊರೊನಾ ಸಂಬಂಧ ಕಠಿನ ನಿಯಮಗಳನ್ನು ದಿಲ್ಲಿ ಸರಕಾರ ಮತ್ತೊಮ್ಮೆ ಜಾರಿಗೊಳಿಸಿದೆ.
ಮಕ್ಕಳಲ್ಲಿ ಅಥವಾ ಮನೆಯ ಸದಸ್ಯರಲ್ಲಿ ಕೊರೊನಾ ಲಕ್ಷಣವಿದ್ದರೆ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಯಾವುದೇ ವಿದ್ಯಾರ್ಥಿ ಅಥವಾ ಶಿಕ್ಷಕರಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇ ಅದನ್ನು ಶಾಲೆಯ ಮೇಲಧಿಕಾರಿ ಗಮನಕ್ಕೆ ತಂದು ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಅದಕ್ಕಾಗಿ ಶಾಲೆಯಲ್ಲಿ ಕ್ವಾರಂಟೈನ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಹೊಂದಬೇಕು ಎಂದು ಸೂಚಿಸಲಾಗಿದೆ.
ಜತೆಗೆ ಶಾಲೆಯ ಅಧ್ಯಾಪಕರು ಮತ್ತು ಸಿಬಂದಿ ಪ್ರತೀ ದಿನ ವಿದ್ಯಾರ್ಥಿಗಳ ಬಳಿ, ಕೊರೊನಾ ಲಕ್ಷಣ ಇದೆಯೇ ಎಂದು ಪ್ರಶ್ನಿಸಬೇಕು. ಶಾಲೆಯ ಪ್ರವೇಶಕ್ಕೆ ಮುನ್ನವೇ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ನಡೆಸಲೂ ಆದೇಶಿಸಲಾಗಿದೆ.
1,042 ಕೇಸು: ಹೊಸದಿಲ್ಲಿಯಲ್ಲಿ ಶುಕ್ರವಾರ 1,042 ಹೊಸ ಕೇಸುಗಳು ದೃಢಪಟ್ಟಿವೆ ಮತ್ತು ಇಬ್ಬರು ಅಸುನೀಗಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ.4.64 ಆಗಿದೆ. ಜತೆಗೆ ಮಾಸ್ಕ್ ಧರಿಸುವ ನಿಯಮ ಕೂಡ ಜಾರಿಯಾಗಿದೆ. ತಪ್ಪಿದಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ. ತಮಿಳುನಾಡಿನಲ್ಲೂ ಇದೇ ನಿಯಮ ಜಾರಿ ಮಾಡಲಾಗಿದೆ.
ಏರಿಕೆ: ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 2,451 ಕೊರೊನಾ ಪ್ರಕರಣ ದೃಢವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ, 14,241ಕ್ಕೆ ಏರಿಕೆಯಾಗಿದೆ. 54 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಚೀನದ ಶಾಂಘೈಯಲ್ಲಿ ಲಾಕ್‌ಡೌನ್ 26ರ ವರೆಗೆ ವಿಸ್ತರಿಸಲಾಗಿದೆ. ಸಾವಿನ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಕೊವಿಶೀಲ್ಡ್ ಉತ್ಪಾದನೆ ಸ್ಥಗಿತ
ಭಾರತದ ಅತಿ ದೊಡ್ಡ ಲಸಿಕೆ ಉತ್ಪಾದನ ಕೇಂದ್ರವಾಗಿರುವ ಸೀರಂ ಇನ್‌ಸ್ಟಿಟ್ಯೂಟ್ “ಕೊವಿಶೀಲ್ಡ್’ ಲಸಿಕೆಯ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ಅದರ ಮುಖ್ಯಸ್ಥ ಆದಾರ್ ಪೂನಾವಾಲ ತಿಳಿಸಿದ್ದಾರೆ. ಡಿಸೆಂಬರ್ ವೇಳೆಗೆ ನಮ್ಮ ಬಳಿ 200 ಮಿಲಿಯನ್ ಡೋಸ್ ಲಸಿಕೆಯಿತ್ತು. ಆದರೆ ಕೊಳ್ಳುವವರು ಇರಲಿಲ್ಲ. ಹಾಗಾಗಿ ಉಚಿತವಾಗಿ ಲಸಿಕೆ ಹಂಚುವುದಾಗಿ ಘೋಷಿಸಿದೆವು. ಲಸಿಕೆಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆ ಉತ್ಪಾದನೆಯನ್ನು ಸ್ಥಗಿತಗೊಳಿಸದೆ ಬೇರೆ ದಾರಿಯಿರಲಿಲ್ಲ ಎಂದು ಅವರು ಹೇಳಿದ್ದಾರೆ.