ರಬಕವಿ ಬನಹಟ್ಟಿ: ಬುಧವಾರದಿಂದ ತಾಲ್ಲೂಕಿನಲ್ಲಿ ಪದವಿಪೂರ್ವ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಹಿಜಾಬ್ ಧರಿಸದೆ ಕಾಲೇಜುಗಳಿಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಕಾಲೇಜುಗಳಲ್ಲಿರುವ ವಸ್ತ್ರ ಸಂಹಿತೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ತಿಳಿಸಿದರು.
ಅವರು ಬುಧವಾರ ಸ್ಥಳೀಯ ಎಸ್ಆರ್ ಎ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ಯಾವುದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಈಗಾಗಲೇ ಕೊರೊನಾದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳಷ್ಟು ತೊಂದರೆಯಾಗಿದೆ. ಈಗ ಶಿಕ್ಷಣವನ್ನು ಪುನರ್ ಕಟ್ಟಬೇಕಾಗಿದೆ. ಆದ್ದರಿಂದ ನ್ಯಾಯಾಲಯದ ಅಂತಿಮ ಅದೇಶವಾಗುವವರೆಗೆ ಮಕ್ಕಳನ್ನು ಶಾಲೆಗೆ ಸಮವಸ್ತ್ರದಲ್ಲಿ ಕಳುಹಿಸಬೇಕು. ಬುಧವಾರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಡಾ.ಹುಲ್ಲೊಳ್ಳಿ ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ, ಸಿಪಿಐ ಜಿ.ಕರುಣೇಶಗೌಡ, ಪಿಎಸ್ಐ ಸುರೇಶ ಮಂಟೂರ, ಪೌರಾಯುಕ್ತ ಶ್ರೀನಿವಾಸ ಜಾಧವ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ಇದ್ದರು.
ಮರಳಿ ಹೋದ ನಾಲ್ಕೈದು ವಿದ್ಯಾರ್ಥಿಗಳು: ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1231 ರಲ್ಲಿ 406 ವಿದ್ಯಾರ್ಥಿಗಳು ಜನರು ಇದ್ದರು. ಅದರಲ್ಲಿ 32 ಜನ ವಿದ್ಯಾರ್ಥಿಗಳು ಹಿಜಾಬ್ ಧರಿಸದೆ ಸಮವಸ್ತ್ರದಲ್ಲಿ ಕಾಲೇಜಿಗೆ ಆಗಮಿಸಿದ್ದರು. ನಾಲ್ಕೈದು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಯಿತು. ನಂತರ ಅವರು ಮನೆಗೆ ಮರಳಿದರು ಎಂದು ಪ್ರಾಚಾರ್ಯ ಎಸ್.ಎಂ.ಶೇಖ ತಿಳಿಸಿದರು.
ಸ್ಥಳೀಯ ಎಸ್ಆರ್ ಎ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 99 ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಇದ್ದು, ಅವರಲ್ಲಿ 47 ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ವರ್ಗಗಳಿಗೆ ಹಾಜರಾದರು. ನಾಲ್ಕು ವಿದ್ಯಾರ್ಥಿಗಳು ಹಿಂದಿರುಗಿ ಹೋದರು ಎಂದು ಪ್ರಾಚಾರ್ಯ ಬಿ.ಆರ್.ಗೊಡ್ಡಾಳೆ ತಿಳಿಸಿದರು.