Advertisement
ತಾಲೂಕಿನಲ್ಲಿರುವ ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿ ಇದು. ತಾಲೂಕಿನಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ ದುಸ್ಥಿತಿ ಹೇಳತೀರದಾಗಿದ್ದು, ಎಷ್ಟೋ ಶಾಲೆಗಳು ದುರಸ್ತಿಗೆ ಕಾದಿವೆ. ಎಷ್ಟೋ ಶಾಲೆಗಳು ದುರಸ್ತಿ ಮಾಡಲಾಗದ ಸ್ಥಿತಿಗೆ ತಲುಪಿವೆ. ಇಂಥ ಶಾಲೆಯಲ್ಲಿಯೇ ಶಿಕ್ಷಕರು ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
Related Articles
Advertisement
ಸವಟಗಿಯಲ್ಲಿ ಬಿದ್ದ ಮೂರು ಕೊಠಡಿ: ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಸವಟಗಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯ ಮೂರು ಕೊಠಡಿ ಗೋಡೆಗಳು ಬಿದ್ದಿವೆ. ಇತರೆ ಕೊಠಡಿಗಳೂ ಸಣ್ಣ ಮಳೆಯಾದರೂ ಸೋರುತ್ತದೆ. ಇಲ್ಲಿಯ ಛಾವಣಿ ಒಳಮೈ ಉದುರಿ ಬೀಳುತ್ತಿದೆ. ಕೊಠಡಿಗಳ ಕಿಟಕಿಗಳು ಮುರಿದು ಹೋಗಿವೆ. ಹೆಂಚುಗಳು ಮುಕ್ಕಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯಾರ್ಥಿಗಳು, ಅಡುಗೆಯವರು, ಶಿಕ್ಷಕರು ಕಟ್ಟಡ ಕುಸಿಯುವ ಭೀತಿ ಎದುರಿಸುತ್ತಿದ್ದಾರೆ. ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲ ಹಿಡಿದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ಸೋಮನಟ್ಟಿ ಶಾಲೆಗೆ ಗ್ರಹಣ: ಸೋಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆ ತಾಣವಾಗಿದೆ. ಇತ್ತೀಚೆಗೆ ಶಾಲಾ ಕೊಠಡಿ ನಿರ್ಮಿಸಲಾಗಿದ್ದು ಉತ್ತಮವಾಗಿಲ್ಲ. ಬಾಗಿಲು ನಿರ್ಮಿಸಿಲ್ಲ. ಸುಣ್ಣ-ಬಣ್ಣ ಬಳಿದಿಲ್ಲ. ಶಾಲೆ ಮುಂದೆ ಶೌಚಾಲಯ ನಿರ್ಮಿಸಿದ್ದರೂ ಅದಕ್ಕೆ ಬಾಗಿಲು ಇಲ್ಲ. ಇಲ್ಲಿ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಶಾಲೆ ಮುಂದೆಯೇ ಗಟಾರು ಇರುವುದರಿಂದ ಗಬ್ಬು ವಾಸನೆ ಬರುತ್ತದೆ. ಗಟಾರು ನಿರ್ಮಾಣ ಕಾರ್ಯ ನಡೆಸಿ ಅದಕ್ಕೆ ಮೇಲ್ಗಡೆ ಕಲ್ಲು ಹಾಕಿ ಮುಚ್ಚಿದರೆ ಅನುಕೂಲವಾಗುತ್ತದೆ. ಶಾಲೆ ಮುಂಭಾಗದಲ್ಲಿ ಗೇಟ್ ಇಲ್ಲ. ರಜೆ ಅವಧಿ ಯಲ್ಲಿ ಅರ್ಧಕ್ಕೆ ನಿಲ್ಲಿಸಿದ ಕೊಠಡಿ ನಿರ್ಮಾಣ ಮಾಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಪ್ರತಿ ವರ್ಷವೂ ಶಿಕ್ಷಣ ಇಲಾಖೆ ಅಧಿ ಕಾರಿಗಳ ಗಮನಕ್ಕೆ ಸಮಸ್ಯೆ ತಂದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಗೊಂಡ ಶಾಲಾ ಕಟ್ಟಡ ನೆಲಸಮಗೊಳಿಸಿ ಪ್ರಸ್ತುತ ಇರುವ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಿದ್ದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತ್ತದೆ ಎನ್ನುವುದು ನಾಗರಿಕರ ಅಭಿಪ್ರಾಯ.
ಕೊರೊನಾದಿಂದ ಮಕ್ಕಳು ಕಲಿಕೆ ಕೊರತೆ ಅನುಭವಿಸಿರುವುದನ್ನು ಮನಗಂಡು ಕಲಿಕಾ ಚೇತರಿಕೆ ಕಾರ್ಯಕ್ರಮದಡಿ ಯೋಜನೆ ರೂಪಿಸಲಾಗಿದೆ. ಮಳೆಬಿಲ್ಲು ಕಾರ್ಯಕ್ರಮದಡಿ ಮಕ್ಕಳಲ್ಲಿ ಕಲೆ, ವಿಜ್ಞಾನ, ಹಾಡು ಇತ್ಯಾದಿ ಪ್ರತಿಭೆ ಅವಕಾಶ ಕಲ್ಪಿಸಿದೆ. ತಾಲೂಕಿನಲ್ಲಿ ದುರಸ್ತಿಯಲ್ಲಿರುವ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. -ಎ.ಎನ್. ಪ್ಯಾಟಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಲಹೊಂಗಲ.
ಮಳೆಗೆ ಬಿದ್ದಿರುವ ಶಾಲಾ ಕೊಠಡಿಗಳ ದುರಸ್ತಿ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. -ಮಹಾಂತೇಶ ಕೌಜಲಗಿ, ಶಾಸಕರು, ಬೈಲಹೊಂಗಲ
- ಅಲ್ಲಲ್ಲಿ ಬಿರುಕು ಬಿಟ್ಟು ದುರಸ್ತಿಗೆ ಕಾದ ಗೋಡೆಗಳು
- ಮಳೆ ಬಂದರೆ ಸೋರುವ ಶಿಥಿಲಗೊಂಡ ಶಾಲೆಗಳು
- ಇಂದೋ-ನಾಳೆಯೋ ಬೀಳುವ ಹಂತದಲ್ಲಿ ಕೊಠಡಿಗಳು