ಕೋಲಾರ: ಮುಂದಿನ ಮೂರು ದಿನಗಳಲ್ಲಿ ಕಲಿಕೆಗೆ ಪೂರಕ ವಾತಾವರಣ, ಸಮರ್ಪಕ ದಾಖಲೆಗಳ ನಿರ್ವಹಣೆ, ಸ್ವಚ್ಛತೆಯಲ್ಲಿ ಸುಧಾರಣೆ ಮಾಡದಿದ್ದಲ್ಲಿ ಶಿಸ್ತು ಕ್ರಮ ಖಚಿತ ಎಂದು ತಾಲೂಕಿನ ಈಚಲ ದಿನ್ನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ನಾರಾಯಣಸ್ವಾಮಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ದೂರು ಹಾಗೂ ಜಿಪಂ ಸಿಇಒ ಅವರ ಸೂಚನೆ ಹಿನ್ನೆಲೆಯಲ್ಲಿ ಶಾಲೆಗೆ ದಿಢೀರ್ ಭೇಟಿ ನೀಡಿದ ಅವರು, ಶಾಲೆಯ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿ, ಶಾಲೆಯಲ್ಲಿ ಇರುವ 4 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
ಶೌಚಾಲಯ ಸ್ವಚ್ಛತೆ: ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದೆ, ಕಾಂಪೌಂಡ್ ನಿರ್ಮಾಣಕ್ಕೂ ನಿರ್ಲಕ್ಷ್ಯ ತೋರಲಾಗಿದೆ, ಶೌಚಾಲಯ ಬಳಸದ ಕಾರಣ ಜೇಡರ ಬಲೆಗಳು ಕಟ್ಟಿ ಹಾಳು ಕೊಂಪೆಯಂತಾಗಿದ್ದು, ಸ್ವತಃ ಬಿಇಒ ಅವರೇ ಶೌಚಾಲಯದಲ್ಲಿನ ಗೂಡುಗಳನ್ನು ಪೊರಕೆ ಸಹಾಯದಿಂದ ಸ್ವಚ್ಛಗೊಳಿಸಿದರು. ಶಾಲಾ ಕೊಠಡಿಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು, ಮೂಲೆಗಳಲ್ಲಿ ಹಳೆ ಪೇಪರ್ ಚೂರುಗಳು, ಕಸ ರಾಶಿಯಾಗಿ ಬಿದ್ದಿದ್ದು, ಸ್ವಚ್ಛತೆಗೆ ಕ್ರಮವಹಿಸಲು ಸೂಚಿಸಿದರು.
ದಾಖಲೆ ಇಟ್ಟಿಲ್ಲ: ಶಾಲೆಯ ಎಸ್‌ಡಿಎಂಸಿ ಖಾತೆಯಲ್ಲಿ 52 ಸಾವಿರ ರೂ. ಇದೆ ಎಂದು ಮೌಖೀಕವಾಗಿ ಶಿಕ್ಷಕರು ತಿಳಿಸಿದರೂ ಈ ಸಂಬಂಧ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ, ಮಕ್ಕಳ ಹಾಜರಾತಿ, ಶಿಕ್ಷಕರ ಹಾಜರಾತಿಯೂ ಇಲ್ಲ ಎಂಬ ಮಾಹಿತಿಯಿಂದ ಬಿಇಒ ಸಿಡಿಮಿಡಿಗೊಂಡರು.
ಕಳೆದ 8 ವರ್ಷಗಳಿಂದ ಇದೇ ಶಾಲೆಯಲ್ಲಿರುವ ಶಿಕ್ಷಕ ನಾರಾಯಣಸ್ವಾಮಿ, ಮುರುಕಲು ಟೇಬಲ್, ಚೇರುಗಳನ್ನೇ ಬಳಸುತ್ತಿದ್ದು, ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ರಸ್ತೆ ಬದಿಯೇ ಶಾಲೆ ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್ ಅಗತ್ಯವಿದೆ. ಈ ಸಂಬಂಧ ಬಿಇಒ ಅವರು, ಗ್ರಾಪಂ ಸದಸ್ಯ ರವಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕಾಂಪೌಂಡ್ ಕಟ್ಟಿಸಿಕೊಡುವ ಭರವಸೆ ನೀಡಿದರು.
ಅಂಗನವಾಡಿಯೂ ಅವ್ಯವಸ್ಥೆ ಆಗರ: ಶಾಲಾ ಶಿಥಿಲ ಕಟ್ಟಡದಲ್ಲೇ ಇರುವ ಅಂಗನವಾಡಿಯಲ್ಲೂ ಐದು ಮಕ್ಕಳಿದ್ದು, ಅದು ಬೀಳುವ ಸ್ಥಿತಿಯಲ್ಲಿದೆ, ಎಂದು ದೂರಿದರು. ಈ ವೇಳೆ ಕ್ಷೇತ್ರ ಸಮನ್ವಯಾಕಾರಿ ರಾಮಕೃಷ್ಣಪ್ಪ, ಇಸಿಒ ಶ್ರೀನಿವಾಸನ್ ಇದ್ದರು.