Advertisement

ಶಾಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು

11:37 AM Aug 25, 2019 | Team Udayavani |

ಕುಮಟಾ: ತಾಲೂಕಿನ ವಾಲಗಳ್ಳಿ ಹಿಪ್ರಾ ಶಾಲೆಯಲ್ಲಿ ಶನಿವಾರ ಗ್ಯಾಸ್‌ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಶಾಲೆಯಲ್ಲಿದ್ದ ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಬಿಸಿಯೂಟದ ಅಡುಗೆಯವರಾದ ಬೇಬಿ ಮಂಜುನಾಥ ನಾಯ್ಕ ಹಾಗೂ ಪ್ರೇಮಾ ಮಡಿವಾಳ ಅವರು ಮಕ್ಕಳಿಗೆ ಅಡುಗೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗ್ಯಾಸ್‌ ರೆಗ್ಯುಲೇಟರ್‌ನಲ್ಲಿನ ಸಮಸ್ಯೆಯಿಂದ ಒಲೆ ಹಚ್ಚಿದ ತಕ್ಷಣ ಸಿಲೆಂಡರ್‌ಗೆ ಬೆಂಕಿ ತಗುಲಿದ್ದು, ರೆಗ್ಯುಲೇಟರ್‌ ಮೂಲಕ ಗ್ಯಾಸ್‌ ಸೋರಿಕೆಯಾಗುತ್ತಿರುವುದರಿಂದ ಏಕಕಾಲಕ್ಕೆ ಬೆಂಕಿಯ ಮಟ್ಟ ಅಧಿಕಗೊಂಡಿದೆ. ಈ ಸಂದರ್ಭದಲ್ಲಿ ರೆಗ್ಯುಲೇಟರ್‌ ಆಫ್‌ ಮಾಡಲು ಪ್ರಯತ್ನಿಸಿದರೂ ಸಹ ಬೆಂಕಿ ಆರಿಸಲು ಸಾಧ್ಯವಾಗಿಲ್ಲ.

ಬೆಂಕಿಯ ಪ್ರಭಾವಕ್ಕೆ ಮಳೆಯಿಂದ ಹಸಿಯಾಗಿರುವ ಮೇಲ್ಛಾವಣಿ ಹೆಂಚುಗಳೂ ಸಹ ಒಡೆದು ಹೋಗಿವೆ. ಅಲ್ಲಿರುವ ಕೆಲ ಪಾತ್ರೆ ಪಗಡೆಗಳು, ಇಮಾರತಿನ ಕೆಲ ಕಟ್ಟಿಗೆ, ಆಹಾರ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ. ತಕ್ಷಣವೇ ಅಡುಗೆ ಕೋಣೆಯಲ್ಲಿದ್ದ ಇನ್ನೆರಡು ಸಿಲಿಂಡರನ್ನು ಹೊರಕ್ಕೆ ಸಾಗಿಸಲಾಯಿತು. ಶಾಲೆಯಲ್ಲಿ 121 ವಿದ್ಯಾರ್ಥಿಗಳಿದ್ದು, ಶನಿವಾರ ಇದೇ ಶಾಲೆಯ ಮೈದಾನದಲ್ಲಿ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟ ನಡೆದಿತ್ತು. ಹೀಗಾಗಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿದ್ದರು. ಅದಲ್ಲದೇ ಈ ಅಡುಗೆ ಕೋಣೆ ಸಮೀಪದಲ್ಲಿಯೇ ಅಂಗನವಾಡಿ ಕೇಂದ್ರವೂ ಇದೆ. ಬೆಂಕಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಮಕ್ಕಳನ್ನು ದೂರಕ್ಕೆ ಕಳುಹಿಸಲಾಗಿತ್ತು.

ಮುಖ್ಯಾಧ್ಯಾಪಕಿ ಪ್ರೇಮಾ ಭಟ್ಟ ತಕ್ಷಣ ಶಿಕ್ಷಣ ಇಲಾಖೆಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಅನಾಹುತವನ್ನು ತಪ್ಪಿಸಿದ್ದಾರೆ.

ಶಾಸಕ ದಿನಕರ ಶೆಟ್ಟಿ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಮುಂದೆ ಎಲ್ಲಿಯೂ ಇಂತಹ ಅವಘಡ ಸಂಭವಿಸದಂತೆ ಶಾಲಾ ಮುಖ್ಯಾಧ್ಯಾಪಕರು, ಅಕ್ಷರ ದಾಸೋಹದ ಸಿಬ್ಬಂದಿ, ಬಿಯೂಟದ ಕಾರ್ಯಕರ್ತೆಯರು ಹಾಗೂ ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ಸೂಚಿಸಿದ್ದಾರೆ.

Advertisement

ಚೈತ್ರದೀಪ ಎಂಟರ್‌ಪ್ರೖಸೆಸ್‌ ಮಾಲಕ ಮದನ ನಾಯಕ ಸ್ಥಳಕ್ಕಾಗಮಿಸಿ ಸಿಲಿಂಡರ್‌ ಹಾಗೂ ರೆಗ್ಯುಲೇಟರ್‌ಗಳನ್ನು ಪರೀಕ್ಷಿಸಿದ್ದಾರೆ. ನಂತರ ಮಾತನಾಡಿದ ಅವರು, ಸಿಲಿಂಡರ್‌ನಲ್ಲಿ ಸೋರಿಕೆಯಿಲ್ಲ್ಲ. ರೆಗ್ಯುಲೇಟರ್‌ ತೊಂದರೆಯಿಂದ ಈ ಅವಘಡ ಕಾಣಿಸಿಕೊಂಡಿದೆ. ಹಲವು ಕಡೆಗಳಲ್ಲಿ ಸುರಕ್ಷಿತ ರೆಗ್ಯುಲೇಟರ್‌ಗಳನ್ನು ಬಳಸುವಂತೆ ಸೂಚಿಸಿದ್ದೇವೆ. ಆದರೂ ಉತ್ತಮ ರೆಗ್ಯುಲೇಟರ್‌ಗಳನ್ನು ಬಳಸದಿರುವುದು ಬೇಸರದ ಸಂಗತಿ ಎಂದರು.

ಸ್ಥಳಕ್ಕೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ತಾಪಂ ಇಒ ಸಿ.ಟಿ.ನಾಯ್ಕ, ಬಿಇಒ ಅಬ್ದುಲ್ ಗಫರ್‌ ಮುಲ್ಲಾ, ಅಕ್ಷರದಾಸೋಹ ಅಧಿಕಾರಿ ದೇವರಾಯ ನಾಯ್ಕ, ಪಿಎಸ್‌ಐ ಇ.ಸಿ. ಸಂಪತ್‌, ಸುಧಾ ಹರಿಕಂತ್ರ ಹಾಗೂ ಇತರ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next