ಕಳೆದ ಒಂದೂವರೆ ವರ್ಷದಿಂದ ಶಾಲೆಯಿಂದ ವಿಮುಖರಾಗಿದ್ದ ಮಕ್ಕಳು ಈಗಷ್ಟೇ ಶಾಲೆಗಳಿಗೆ ಅತ್ಯಂತ ಉತ್ಸಾಹದಿಂದಲೇ ಆಗಮಿಸುತ್ತಿದ್ದು, ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಕಾಣುತ್ತಿದೆ. ಶಾಲೆಗೆ ಮಕ್ಕಳ ಹಾಜರಾತಿಯೂ ಚೆನ್ನಾಗಿದ್ದು, ಒಂದೂವರೆ ವರ್ಷದಿಂದ ಮನೆಯಲ್ಲೇ ಉಳಿದಿದ್ದ ಮಕ್ಕಳಿಗೆ ಈಗ ಸ್ವತಂತ್ರ ಮತ್ತು ಮುಕ್ತ ವಾತಾವರಣ ಸಿಕ್ಕಂತಾಗಿದೆ. ಮಕ್ಕಳ ಹಾಜರಾತಿ ಬಗ್ಗೆ ಉದಯವಾಣಿ ನಡೆಸಿದ್ದ ಮೆಗಾ ಸಮೀಕ್ಷೆಯಲ್ಲಿ ಶಿಕ್ಷಕರು ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೊರೊನಾ ಪೂರ್ವಕ್ಕಿಂತಲೂ ಈಗ ಮಕ್ಕಳು ಮತ್ತಷ್ಟು ಕ್ರಿಯಾಶೀಲರಾಗಿದ್ದಾರೆ ಎಂದೂ ಹೇಳಿರುವ ಶಿಕ್ಷಕರು, ಮಕ್ಕಳ ಬುದ್ಧಿವಂತಿಕೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಪಾಠವಾಗಲಿ, ಕೊರೊನಾ ವೇಳೆಯಲ್ಲಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇದ್ದ ಮಕ್ಕಳಲ್ಲಿ ಕೊಂಚ ಬದಲಾವಣೆಗಳಾಗಿ
ರುವುದು ಸತ್ಯ. ಆದರೆ ಶಾಲೆಗೆ ಬರಲು ಅವರಲ್ಲಿದ್ದ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎಂಬುದನ್ನೂ ಶಿಕ್ಷಕರು ತಮ್ಮ ಅಭಿಪ್ರಾಯದಲ್ಲಿ ಹೇಳಿದ್ದಾರೆ.
ಆದರೆ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಪ್ರಮುಖವಾಗಿ ಕಂಡದ್ದು, ಮಕ್ಕಳಲ್ಲಿ ಏಕಾಗ್ರತೆ ಮತ್ತು ಗ್ರಹಿಕೆಯ ಶಕ್ತಿ ಕಡಿಮೆಯಾಗಿದೆ ಎಂಬುದು. ಇದು ಕಳವಳಕಾರಿ ಸಂಗತಿ ಕೂಡ. ಬಹುತೇಕ ಶಿಕ್ಷಕರು ಈ ವಿಚಾರವನ್ನು ಪ್ರಸ್ತಾವಿಸಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಮುಂದೆ ಆನ್‌ಲೈನ್ ಪಾಠ ಕೇಳುತ್ತಿದ್ದ ಮಕ್ಕಳಿಗೆ ತದೇಕಚಿತ್ತವಾಗಿ ಕುಳಿತುಕೊಳ್ಳುವುದು ಕಷ್ಟವಾಗಿತ್ತು. ಅಲ್ಲದೆ ಮನೆಯ ಮೂಲೆಯೊಂದರಲ್ಲಿ ಕುಳಿತುಕೊಂಡು ಪಾಠ ಕೇಳುತ್ತಿದ್ದ ಮಕ್ಕಳಿಗೆ ಶಿಕ್ಷಕರ ಭಯವೂ ಇರಲಿಲ್ಲ. ಹೀಗಾಗಿ ಆನ್‌ಲೈನ್ ಪಾಠದ ಅವಧಿಯಲ್ಲೇ ವೀಡಿಯೋ ಆಫ್ ಮಾಡಿ ಆಗೊಮ್ಮೆ ಈಗೊಮ್ಮೆ ಎದ್ದು ಹೋಗುವುದು, ಮಧ್ಯೆ ಮಧ್ಯೆ ತಿಂಡಿ-ತಿನಿಸು ತಿನ್ನುವುದು ಹೀಗೆ ಅಭ್ಯಾಸವನ್ನೇ ರೂಢಿಸಿಕೊಂಡಿದ್ದರು. ಈಗ ದಿಢೀರನೇ ಶಾಲೆಯಲ್ಲಿ ಕುಳಿತುಕೊಳ್ಳುತ್ತಿರುವ ಮಕ್ಕಳಿಗೆ ಏಕಾಗ್ರತೆ ಬರುತ್ತಿಲ್ಲ. ಅಲ್ಲದೇ ಶಿಕ್ಷಕರು ಹೇಳುವ ಪಾಠವೂ ತಲೆಗೆ ಹೋಗುತ್ತಿಲ್ಲ. ಹಾಗೆಂದು ಮಕ್ಕಳು ಸರಿಯಾಗಿ ಪಾಠ ಕೇಳುತ್ತಿಲ್ಲವೆಂದು, ಅವರನ್ನು ಶಿಕ್ಷಿಸುವುದು ಸಲ್ಲದು ಎಂದು ಹೇಳುತ್ತಾರೆ ಶಿಕ್ಷಣ ತಜ್ಞರು ಮತ್ತು ಮನೋವಿಜ್ಞಾನಿಗಳು.
ಇದನ್ನೂ ಓದಿ : ಮತ್ತಷ್ಟು ಉತ್ತಮ ಆಡಳಿತಕ್ಕೆ ಶ್ರೀಕಾರ : ಹಳೇ ಬೇರು, ಹೊಸ ಚಿಗುರಿನ ಪರಿಕಲ್ಪನೆ
ಮಕ್ಕಳನ್ನು ಮತ್ತೆ ಪಾಠ ಕೇಳುವಂತೆ ಮಾಡಲು, ಅವರಲ್ಲಿ ಏಕಾಗ್ರತೆ ಬರುವಂತೆ ಮಾಡುವ ಸಲುವಾಗಿ ಶಿಕ್ಷಣ ಇಲಾಖೆ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜರೂರತ್ತು ಸದ್ಯಕ್ಕಂತೂ ಇದೆ. ಆಟದ ಜತೆಗೆ ಕಲಿಕೆ, ಹಾಡಿನ ಮೂಲಕ ಕಲಿಕೆಯಂಥ ಕಾರ್ಯಕ್ರಮಗಳ ಮೂಲಕ ಅವರನ್ನು ಪಾಠದತ್ತ ಸೆಳೆಯಬೇಕು. ಜತೆಗೆ, ಶಾಲಾ ಕೊಠಡಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಒಂದಷ್ಟು ಸಮಯವನ್ನಾದರೂ ಮಕ್ಕಳಿಗೆ ನೀಡುವ ಕೆಲಸವಾಗಬೇಕು.
ಶಿಕ್ಷಣ ತಜ್ಞರು ಹೇಳುವ ಹಾಗೆ ಏಕಾಗ್ರತೆ ಮೂಡಿಸಲು ಚಟುವಟಿಕೆ ಆಧರಿತವಾಗಿ ಶಿಕ್ಷಣ ನೀಡುವುದು, ಮಕ್ಕಳ ಮಟ್ಟಕ್ಕೆ ಶಿಕ್ಷಕರೇ ಇಳಿದು ಪಾಠ ಮಾಡುವುದು, ವಿಶೇಷ ಚಟುವಟಿಕೆಗಳ ಮೂಲಕ ಪಾಠ ಮಾಡುವ ವ್ಯವಸ್ಥೆಯನ್ನು ಶಾಲೆಗಳಲ್ಲಿ ಜಾರಿಗೆ ತರಬೇಕು. ಜತೆಗೆ ಇದುವರೆಗೆ ಮೊಬೈಲ್ ಜತೆಯಲ್ಲೇ ಇದ್ದ ಮಕ್ಕಳಿಂದ ಏಕಾಏಕಿ ಮೊಬೈಲ್ ಮುಟ್ಟಬೇಡಿ ಎಂಬ ಶಿಕ್ಷೆಯನ್ನು ಕೊಡುವುದೂ ಸಲ್ಲದು.