Advertisement

ಶಾಲೆಗಳಿಗೆ ಸಿಂಗಾರ; ಭವಿಷ್ಯವಾಗಲಿ ಬಂಗಾರ

10:18 AM May 29, 2019 | Suhan S |

ಬೆಳಗಾವಿ: ಬೇಸಿಗೆ ರಜೆ ಮುಗಿದು ಇನ್ನು ಶಾಲೆಗಳತ್ತ ಹೆಜ್ಜೆ ಹಾಕುವ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ. ಶಾಲಾ ಪ್ರಾರಂಭೋತ್ಸವ ವಿನೂತನವಾಗಿ ಆಚರಿಸಲು ಶಿಕ್ಷಕರು ವಿಶೇಷವಾಗಿ ತಯಾರಿ ಮಾಡಿಕೊಂಡಿದ್ದಾರೆ.

Advertisement

ಮೇ 29ರಿಂದ ಆರಂಭವಾಗುವ ಶಾಲೆಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ. ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡು ಆಕರ್ಷಣೀಯವಾಗಿ ಶಾಲೆಗಳನ್ನು ಅಲಂಕರಿಸಲಾಗಿದೆ. ಮಕ್ಕಳಿಗೆ ಸಂತಸದ ಅನುಭವ ನೀಡಲು ಎಲ್ಲ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮಕ್ಕಳಿಗೆ ಸಿಹಿ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಜ್ಜಿ, ಅಜ್ಜನ ಊರಿಗೆ ತೆರಳಿ ಭಾರದ ಹೃದಯದಿಂದ ಮನೆಗಳಿಗೆ ವಾಪಸ್ಸಾಗಿರುವ ಮಕ್ಕಳಿಗೆ ಮತ್ತೆ ಶಾಲೆಯ ಸಮಯಕ್ಕೆ ಹೊಂದಿಕೊಳ್ಳುವುದು ಪ್ರಾರಂಭದಲ್ಲಿ ಬೇಜಾರಾಗದಿರಲಿ ಎಂದು ಶಾಲೆಗಳನ್ನು ವಿನೂತನ ಹಾಗೂ ಆಕರ್ಷಕವಾಗಿ ಸಿಂಗಾರಗೊಳಿಸಲಾಗಿದೆ. ಮಕ್ಕಳು ಖುಷಿಯಿಂದ ಶಾಲೆಗಳತ್ತ ಹೆಜ್ಜೆ ಹಾಕಲು ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಮೇ 29ರಂದು ಶಾಲೆಗೆ ಬರುವ ಮಕ್ಕಳಿಗೆ ಪುಸ್ತಕ, ಬಟ್ಟೆ ಹಂಚಿಕೆ ಕಾರ್ಯವೂ ನಡೆಯಲಿದೆ.

ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಆವರಣ, ಕೊಠಡಿಗಳ ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆ, ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಶಾಲಾ ಆವರಣದ ಗಿಡ-ಮರಗಳಿಗೆ ನೀರುಣಿಸುವುದು, ಉದ್ಯಾನವನದಲ್ಲಿಯ ಕಸ ಕಡ್ಡಿಗಳನ್ನು ತೆಗೆಯುವುದು ಹೀಗೆ ಅನೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಶಾಲೆ ಆರಂಭವಾಗುತ್ತಿದ್ದಂತೆ ಮಳೆಗಾಲವೂ ಶುರು ಆಗುತ್ತದೆ. ಹೀಗಾಗಿ ಹಂಚಿನ ಶಾಲೆಗಳಲ್ಲಿ ಮುಂಜಾಗ್ರತ ಕ್ರಮ ಕೈಗೊಂಡು ಸೂರುವ ಶಾಲೆಗಳ ಬಗ್ಗೆ ನಿಗಾ ವಹಿಸಲಾಗಿದೆ.

ಎಸ್‌ಡಿಎಂಸಿ ಹಾಗೂ ಪೋಷಕರನ್ನು ಕರೆಯಿಸಿ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಗುತ್ತದೆ. ಕೆಲ ಶಾಲೆಗಳಲ್ಲಿ ಬೆಳಗ್ಗೆ ಮೆರವಣಿಗೆ ನಡೆಸಿ ಮಕ್ಕಳನ್ನು ಕರೆ ತರುವ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಲಾಗಿದೆ. ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ಮಾಡಿಸಿ ಕರೆ ತಂದು ಮಕ್ಕಳಲ್ಲಿ ಉತ್ಸಾಹ ಮೂಡಿಸಲಾಗುವುದು. 29ರಂದು ಮೊದಲನೇ ದಿನ ತರಗತಿ ನಡೆಯದಿದ್ದರೂ ಶಾಲಾ ಪ್ರಾರಂಭೊತ್ಸವದ ಕಾರ್ಯಕ್ರಮದಲ್ಲಿಯೇ ಇಡೀ ದಿನ ಶಿಕ್ಷಕರು ಹಾಗೂ ಮಕ್ಕಳು ಕಳೆಯುತ್ತಾರೆ.

Advertisement

ಮಕ್ಕಳಿಗೆ 34 ಅಂಶಗಳ ಕಲಿಕಾ ಕ್ರಮಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಮೊದಲು ಪೂರ್ವಭಾವಿಯಾಗಿ ಪರೀಕ್ಷೆ ನಡೆಸಿ ಮಕ್ಕಳಲ್ಲಿನ ಕಲಿಕಾ ನ್ಯೂನತೆಗಳನ್ನು ಗುರುತಿಸಿ ಶಿಕ್ಷಣ ನೀಡುವ ಹಂತದಲ್ಲೂ ವಿಶೇಷವಾಗಿ ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಆಯಾ ಶಾಲೆಗಳಲ್ಲಿ ಪೋಷಕರ ಸಭೆ ಕರೆದು ಮಕ್ಕಳ ಶೈಕ್ಷಣಿಕ ಗುಣಮಟ್ಟದ ಕುರಿತು ತಿಳಿಸುವುದು, ಪೋಷಕರ ಸಹಾಯ ಪಡೆಯುವುದು, ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರ ಪ್ರೀತಿ ಬೆಳೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೇಸಿಗೆ ರಜೆಯಲ್ಲಿ ಮಜಾ ಮಾಡಿರುವ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತವೆ. ಇಂಥ ಸಂದರ್ಭದಲ್ಲಿ ಮಕ್ಕಳನ್ನು ವಿಶೇಷವಾಗಿ ಆಹ್ವಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಸಲ ನಮ್ಮ ಶಾಲೆಯಲ್ಲಿ ಚಕ್ಕಡಿಯನ್ನು ಸಿಂಗರಿಸಿ ಮಕ್ಕಳನ್ನು ಚಕ್ಕಡಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ಶಾಲೆಗೆ ಕರೆ ತರಲಾಗುವುದು. ಮಕ್ಕಳ ಬೇಸರ ಕಳೆದು ಶಾಲಾ ಪ್ರಾರಂಭೋತ್ಸವದಂದು ಸಿಹಿ ನೀಡುವ ರೂಢಿ ಬೆಳೆದುಕೊಂಡು ಬಂದಿದೆ. • ಉಮೇಶಕುಮಾರ ಬಿರಾದಾರ, ಶಾಲಾ ಮುಖ್ಯೋಪಾಧ್ಯಾಯರು, ಸುಳೇಭಾವಿ
ಮೊಳಗಲಿವೆ ಘೋಷಣೆಗಳು:
ಮಕ್ಕಳನ್ನು ಶಾಲೆಗೆ ಕರೆ ತರಲು ಶಿಕ್ಷಣ ಇಲಾಖೆ ಕೆಲವು ಘೋಷಣೆಗಳನ್ನು ಸಿದ್ಧಗೊಳಿಸಿದೆ. ಪ್ರಭಾತ ಫೇರಿ ನಡೆಸಿ ಮಕ್ಕಳನ್ನು ಶಾಲೆಗೆ ಆಹ್ವಾನಿಸುವ ಘೋಷಣೆಗಳು ಮೊಳಗಲಿವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಾಗೋಣ, ಕಲಿತವರು ಕಲಿಸಿರಿ, ಕಲಿಯದವರು ಕಲಿಯಿರಿ, ಶಿಕ್ಷಣ ಕೊಡಿಸಿರಿ ಮಕ್ಕಳ ಬಾಳು ಬೆಳಗಿಸಿರಿ, ಅರಿವೇ ಗುರು-ಗುರುವೇ ಶಿಕ್ಷಣ, ಅರಿವಿಗೆ ಆಧಾರ ಶಿಕ್ಷಣ, ಸಮೃದ್ಧ ಸಮಾಜ ಕಟ್ಟಲು ಉತ್ತಮ ಶಿಕ್ಷಣ ಬೇಕು, ಶಾಲೆ ಆರಂಭವಾಗಿದೆ ವಿದ್ಯಾರ್ಥಿಗಳು ಶಾಲೆಗೆ ಬನ್ನಿ ಹೀಗೆ ವಿವಿಧ ಘೋಷಣೆಗಳು ಮೊಳಗಲಿವೆ.
•ಭೈರೋಬಾ ಕಾಂಬಳೆ
Advertisement

Udayavani is now on Telegram. Click here to join our channel and stay updated with the latest news.

Next