ಬೆಂಗಳೂರು: ಇದೇ ಸೋಮವಾರ, ಸೆ. 6ರಿಂದ ರಾಜ್ಯಾದ್ಯಂತ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಶನಿವಾರ, ರವಿವಾರ ಸೋಂಕು ಪ್ರಕರಣ ಕಡಿಮೆಯಾಗಿ, ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆಯಾದರೆ ಇಲ್ಲೂ ಶಾಲಾರಂಭ ಖಚಿತ.
ಶನಿವಾರ ಐದು ಗಡಿ ಜಿಲ್ಲೆಗಳ ಕೋವಿಡ್ 19 ಸ್ಥಿತಿಗತಿ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, 9, 10 ಮತ್ತು ಪಿಯು ತರಗತಿಗಳು ಸಮಸ್ಯೆ ಇಲ್ಲದೆ ನಡೆಯುತ್ತಿವೆ. ಸದ್ಯ ಸೋಂಕು ಕಡಿಮೆಯಾಗಿದ್ದು, ಸೋಮವಾರದಿಂದ 6,7 ಮತ್ತು 8ನೇ ತರಗತಿ ಆರಂಭಿಸಲಾಗುತ್ತದೆ. ಮುಂದೆ ಪರಿಸ್ಥಿತಿ ನೋಡಿ 1ರಿಂದ 5ನೇ ತರಗತಿ ಆರಂಭಿಸಲಾಗುವುದು ಎಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಡಿ.ಸಿ.ಗಳು ಸಭೆಯಲ್ಲಿ ಭಾಗವಹಿಸಿದ್ದರು. ಪರೀಕ್ಷೆ ಹೆಚ್ಚಿಸುವಂತೆ ಮತ್ತು ತಮ್ಮ ಜಿಲ್ಲೆಯ ಪರಿಸ್ಥಿತಿ ಕುರಿತು ತೀವ್ರ ನಿಗಾ ವಹಿಸುವಂತೆ ಜಿಲ್ಲಾಧಿ ಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಮತ್ತು ನಗರ ಪ್ರದೇಶದಲ್ಲಿ ಪರೀಕ್ಷೆ ಪ್ರಮಾಣ, ಲಸಿಕೆಯ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
ದ.ಕ.: ಪಾಸಿಟಿವಿಟಿ ಇಳಿಕೆ ನಿರೀಕ್ಷೆ :
ಕಳೆದ ತಿಂಗಳು ಕೊರೊನಾ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ತೆರೆಯಲು ಸರಕಾರ ಅನುಮತಿ ನೀಡಿತ್ತು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದ ಕಾರಣ ಶಾಲಾರಂಭವಾಗಿರಲಿಲ್ಲ. ಸದ್ಯ ಕೊಡಗು, ದಕ್ಷಿಣ ಕನ್ನಡದಲ್ಲಿ ಮಾತ್ರ ಶೇ. 2ರಷ್ಟಿದ್ದು, ಶನಿವಾರ ಮತ್ತು ರವಿವಾರ ಸೋಂಕು ಇನ್ನಷ್ಟು ಕಡಿಮೆಯಾಗಿ ಇಲ್ಲೂ ಶಾಲಾರಂಭಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ.