Advertisement

ಒಂದೂವರೆ ವರ್ಷದ ಬಳಿಕ ಗಂಟೆ ಸದ್ದು

01:29 PM Aug 23, 2021 | Team Udayavani |

ಹುಬ್ಬಳ್ಳಿ: ಒಂದುವರೆ ವರ್ಷದಿಂದ ಮರೆಯಾಗಿದ್ದ ಢಣ ಢಣ ಗಂಟೆಯ ಸದ್ದು, ಕಪ್ಪು ಹಲಗೆಯ ಪಾಠ-ಪ್ರವಚನ, ಆವರಣದಲ್ಲಿ ಮಕ್ಕಳ ಕಲರವ, ಗುರು-ಶಿಷ್ಯರ ಸಮಾಗಮಕ್ಕೆ ಸೋಮವಾರ ಕಾಲ ಕೂಡಿ ಬಂದಿದೆ.

Advertisement

ಶಾಲೆಗಳ ಪುನರಾರಂಭಕ್ಕೆ ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಇನ್ನಿಲ್ಲದ ಕಸರತ್ತು ನಡೆದಿವೆ. ವಿದ್ಯಾರ್ಥಿಗಳ, ಶಿಕ್ಷಕರ ಸುರಕ್ಷತೆಗೆ ಮಾರ್ಗಸೂಚಿ ರೂಪಿಸಲಾಗಿದ್ದು, ಮಕ್ಕಳ ಬರುವಿಕೆಗಾಗಿ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಶಾಲೆಗಳ ಆರಂಭಕ್ಕೆ ಕಳೆದೊಂದು ವಾರದಿಂದ ಸುರಕ್ಷಿತ ಕ್ರಮಗಳ ಬಗ್ಗೆ ತಾಲೀಮು ನಡೆದಿದೆ. ಮೊದಲ ಹಂತದಲ್ಲಿ 9, 10 ನೇ ತರಗತಿಗಳನ್ನು ಆರಂಭಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಪಾಲಕರ, ಪೋಷಕರ ಸಭೆಗಳನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

ಆನ್‌ ಲೈನ್‌ ಶಿಕ್ಷಣಕ್ಕೆ ತೊಂದರೆ, ಆರ್ಥಿಕ ಸಮಸ್ಯೆ ಇರುವ ಪಾಲಕರು, ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಜನರು ಭೌತಿಕ ಶಿಕ್ಷಣಕ್ಕೆ ಒಲವು ತೋರಿದ್ದಾರೆ. ಶಿಕ್ಷಕರ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸರಕಾರ ನೀಡಿರುವ ಎಸ್‌ಒಪಿ ಪ್ರಕಾರ ತರಗತಿಗಳು ನಡೆಯಲಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಪ್ರೌಢಶಾಲೆಗಳನ್ನು ಶುಚಿಗೊಳಿಸಿ ಸಿದ್ಧತೆ ಮಾಡಲಾಗಿದೆ.

ಸುರಕ್ಷತಾ ಕ್ರಮಕ್ಕೆ ಒತ್ತು

ಮೂರನೇ ಅಲೆ ಮಕ್ಕಳ ಮೇಲೆ ಎನ್ನುವ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಶಾಲೆ ಆರಂಭಕ್ಕೆ ಅಧಿಕೃತ ಮುದ್ರೆ ಬೀಳುತ್ತಿದ್ದಂತೆ ಮಕ್ಕಳ ಆರೋಗ್ಯ ತಪಾಸಣೆ, ತರಗತಿ, ಕಚೇರಿ, ಆವರಣ, ಅಡುಗೆ ಕೋಣೆ, ಪಾತ್ರೆ ಸ್ವತ್ಛಗೊಳಿಸಲಾಗಿದೆ. ತರಗತಿಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ, ನಿತ್ಯವೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಪಠ್ಯಕ್ರಮದೊಂದಿಗೆ ಆರೋಗ್ಯ ವೃದ್ಧಿಗಾಗಿ ಯೋಗ, ಲಘು ವ್ಯಾಯಾಮಕ್ಕೆ ಒತ್ತು ನೀಡಲಾಗಿದೆ.

Advertisement

ಮನೆಯಿಂದಲೇ ಊಟ, ಉಪಹಾರ ನೀರು ತರಬೇಕಿದೆ. ಪಠ್ಯ ಸಾಮಗ್ರಿಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳದಿರುವ ಬಗ್ಗೆ ಜಾಗೃತಿ, ವಿದ್ಯಾರ್ಥಿ, ಶಿಕ್ಷಕರು ಹೊರತುಪಡಿಸಿ ಇತರರಿಗೆ ತರಗತಿಗಳಿಗೆ ಅವಕಾಶವಿಲ್ಲ. ಭೌತಿಕ ಶಿಕ್ಷಣಕ್ಕೆ ಪಾಲಕರ ಲಿಖೀತ ಒಪ್ಪಿಗೆ ಕಡ್ಡಾಯವಾಗಿದ್ದು, ಹಾಜರಾತಿ ಕಡ್ಡಾಯವಲ್ಲ. ಆದರೆ ಆನ್‌ ಲೈನ್‌ ಅಥವಾ ಭೌತಿಕ ಶಿಕ್ಷಣ ಎರಡರಲ್ಲಿ ಒಂದಕ್ಕಾದರೂ ಹಾಜರಾತಿ ಕಡ್ಡಾಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next