ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 1ರಿಂದ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಉತ್ತರಪ್ರದೇಶ ಸರ್ಕಾರ ಗುರುವಾರ (ಜೂನ್ 17) ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿ ತಾಯಿಯ ಸಮಾನ, ರೇಣುಕಾಚಾರ್ಯ ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ
ಪ್ರಾಥಮಿಕ ಶಿಕ್ಷಣ ಪರಿಷತ್ ನ ಕಾರ್ಯದರ್ಶಿ ಪ್ರತಾಪ್ ಸಿಂಗ್ ಬಾಘೇಲ್ ಅವರು ಈ ಆದೇಶವನ್ನು ರಾಜ್ಯಾದ್ಯಂತದ ವಿಭಾಗೀಯ ಸಹಾಯಕ ಶಿಕ್ಷಣ ನಿರ್ದೇಶಕರು ಮತ್ತು ಪ್ರಾಥಮಿಕ ಶಿಕ್ಷಣ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ವರದಿ ವಿವರಿಸಿದೆ.
ಜುಲೈ 1ರಿಂದ ರಾಜ್ಯಾದ್ಯಂತ ಇರುವ 1.5 ಲಕ್ಷ ಸರ್ಕಾರಿ ಶಾಲೆಗಳು ತೆರೆಯಲಿದೆ. ಶಾಲೆಗಳಿಗೆ ಸಿಬಂದಿಗಳು ಮತ್ತು ಶಿಕ್ಷಕರು ಹಾಜರಾಗುವ ಮೂಲಕ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ಆದರೆ ಮುಂದಿನ ಆದೇಶದವರೆಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಆಗಮಿಸಲು ಅನುಮತಿ ಇಲ್ಲ ಎಂದು ಸರ್ಕಾರ ಬಿಡುಗಡೆಗೊಳಿಸಿರುವ ಆದೇಶದಲ್ಲಿ ತಿಳಿಸಿದೆ.
ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ನೋಂದಣಿ ಮತ್ತು ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಮುನ್ನ ಶಾಲಾ ಕಟ್ಟಡದ ನಿರ್ವಹಣೆಗಾಗಿ ರಾಜ್ಯಾದ್ಯಂತ ಶಾಲೆಗಳನ್ನು ತೆರೆಯಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದೆ.