ರಬಕವಿ-ಬನಹಟ್ಟಿ : ಮೇ 29ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು, ಆ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳನ್ನು ಇಲಾಖೆ ಕೈಗೊಳ್ಳುತ್ತಿದೆ.
ಮೇ 29 ಹಾಗೂ 30 ರಂದು ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಪೂರ್ವ ತಯಾರಿಯಲ್ಲಿ ತೊಡಗಲಿದ್ದಾರೆ . ಶಾಲಾ ಕೋಣೆ, ಆವರಣ, ಅಡುಗೆ ಕೋಣೆ, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು, ನೀರಿನ ಟ್ಯಾಂಕ್ ಇತ್ಯಾದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದ್ದು, ಶಿಕ್ಷಕರು ತರಗತಿ, ಶಾಲಾ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿಕೊಂಡು ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದಾರೆ
ಮೇ 31 ಪ್ರಾರಂಭೋತ್ಸವ: ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಶಾಲಾ ವಾತಾವರಣವನ್ನ ಆಕರ್ಷಕಗೊಳಿಸಿ ಅತ್ಯಂತ ಉತ್ಸಾಹದಿಂದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಚ್ ಡಿಎಂಸಿ ಹಾಗೂ ಪೋಷಕರು ಸೇರಿ ಶಾಲಾ ಮಕ್ಕಳನ್ನು ಸ್ವಾಗತಿಸಲಿದ್ದಾರೆ. ಮಧ್ಯಾಹ್ನದ ಬಿಸಿ ಊಟವನ್ನು ಸಿಹಿಯೊಂದಿಗೆ ಆರಂಭಿಸಿ ಶಾಲೆಯನ್ನು ಆಕರ್ಷಕ ಕೇಂದ್ರ ಮಾಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ.
ಸೇತುಬಂಧ ಕಾರ್ಯಕ್ರಮ: ಮೊದಲ ದಿನದಿಂದಲೇ ಪಾಠ/ ಸೇತುಬಂಧ ಶಿಕ್ಷಣ ವಾಗಲಿದ್ದು ಒಂದರಿAದ ಮೂರನೇ ತರಗತಿಗಳಿಗೆ 25 ದಿನಗಳು ಹಾಗೂ ನಾಲ್ಕರಿಂದ 10ನೇ ತರಗತಿಗಳಿಗೆ 15 ದಿನಗಳು ಸೇತುಬಂಧ ಶಿಕ್ಷಣವನ್ನು ನಿರ್ವಹಿಸುಲಾಗುತ್ತದೆ. ಅವಧಿಯಲ್ಲಿ ಮಕ್ಕಳ ಕಲಿಕಾ ನ್ಯೂನ್ಯತೆಗಳನ್ನು ಗುರುತಿಸಿ ಪರಿಹಾರ ಬೋಧನೆ ಮಾಡುವ ಮೂಲಕ ಮಕ್ಕಳನ್ನು ಮುಂದಿನ ಕಲಿಕೆಗೆ ಅಣಿ ಮಾಡಲಾಗುತ್ತದೆ.
ಶಾಲಾ ದಾಖಲಾತಿ ಆಂದೋಲನ: ಶಾಲೆಗೆ ದಾಖಲಾಗದಿರುವ ಹರವಯಿಸಿನ ಮಕ್ಕಳು ಹಾಗೂ ಶಾಲೆಯನ್ನು ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ದಾಖಲಾತಿ ಆಂದೋಲನ ಕೈಗೊಳ್ಳಲಾಗುತ್ತದೆ. 2023ರ ಜೂನ್ ಒಂದಕ್ಕೆ ನಾಲ್ಕು ವರ್ಷ ತುಂಬಿದ ಎಲ್ಲ ಮಕ್ಕಳು ಎಲ್‌ಕೆಜಿ ತರಗತಿಗೆ ದಾಖಲಾಗಲು ಅರ್ಹ ಆಗಿರುತ್ತಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪಠ್ಯ ಪುಸ್ತಕಗಳ ಪೂರೈಕೆ ಈಗಾಗಲೇ ಬಹುತೇಕ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದ್ದು ಶಾಲಾ ಪ್ರಾರಂಭೋತ್ಸವದ ಮುಂಚಿತವಾಗಿ ಮಕ್ಕಳ ಕೈ ಸೇರಲಿವೆ.
ಶೈಕ್ಷಣಿಕ ಗುಣಮಟ್ಟದ ವರ್ಷ: 2022-23ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಚೇತರಿಕೆ ವರ್ಷ ಎಂದು ಸಂಕಲ್ಪಿಸಿ ಮಕ್ಕಳಲ್ಲಿ ಕಲಿಕಾ ಅಭಿವೃದ್ಧಿಯನ್ನು ಮರುಸ್ಥಾಪಿಸಲು ಪ್ರಯತ್ನ ಮಾಡಲಾಗಿತ್ತು. ಪ್ರಸ್ತುತ ಶೈಕ್ಷಣಿಕ ಸಾಲನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಆಚರಿಸಲಾಗುತ್ತಿದ್ದು ಪರಿಣಾಮಕಾರಿಯಾದ ಮತ್ತು ರಚನಾತ್ಮಕ ಚಟುವಟಿಕೆಗಳನ್ನು ಶಾಲೆಗಳು ಸಂಘಟಿಸಲು ಸೂಚನೆಗಳನ್ನು ನೀಡಲಾಗಿದೆ. ಶಿಕ್ಷಕರು ನಿತ್ಯದ ಚಟುವಟಿಕೆಗಳು, ವಾರದ ವಿಶೇಷಗಳು, ಮಾಸಿಕ ಕಾರ್ಯಕ್ರಮಗಳು ಇವುಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ರೂಪಿಸಿಕೊಂಡು ಕಾರ್ಯ ಪ್ರವೃತ್ತರಾಗಲಿದ್ದಾರೆ.
ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸದಂತೆ ಎಚ್ಚರಿಕೆ ನೀಡಲಾಗಿದ್ದು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ರಮ ವಹಿಸಲು ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಅತಿಥಿ ಶಿಕ್ಷಕರ ನೇಮಕ : ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರು ನೇಮಿಸಿಕೊಳ್ಳುವ ಮೂಲಕ ಕಲಿಕಾ ಬೋಧನಾ ಪ್ರಕ್ರಿಯೆಗೆ ತೊಂದರೆಯಾಗದAತೆ ಕ್ರಮವಹಿಸಲಾಗುತ್ತಿದೆ.
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಿ ಮಕ್ಕಳನ್ನು ಸಿಹಿಯೊಂದಿಗೆ ಸ್ವಾಗತಿಸಲು ನಮ್ಮ ಶಾಲೆಗಳು ಸನ್ನದ್ಧವಾಗಿವೆ. ನೂರಕ್ಕೆ ನೂರು ದಾಖಲಾತಿ ಹಾಗೂ ಹಾಜರಾತಿ ನಮ್ಮ ಉದ್ದೇಶವಾಗಿದೆ.
– ಅಶೋಕ್ ಬಸಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ
2023-24ನೇ ಶೈಕ್ಷಣಿಕ ವರ್ಷ ಮಕ್ಕಳ ಕಲಿಕೆಯಲ್ಲಿ ಗರಿಷ್ಠ ಕಲಿಕೆಯ ಮೈಲುಗಲ್ಲಾಗಲಿ ಎಂಬ ಆಶಯವಿದ್ದು ಶೈಕ್ಷಣಿಕ ವರ್ಷ ಆರಂಭಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
-ಶ್ರೀಶೈಲ ಬುರ್ಲಿ, ಶಿಕ್ಷಣ ಸಂಯೋಜಕರು, ಜಮಖಂಡಿ
– ಕಿರಣ ಶ್ರೀಶೈಲ ಆಳಗಿ