Advertisement

ಜಲಕ್ಷಾಮದ ನಡುವೆ ಶಾಲಾರಂಭಕ್ಕೆ ಮುಹೂರ್ತ ನಿಗದಿ

12:21 AM May 21, 2019 | Team Udayavani |

ಉಡುಪಿ: ಜಲಕ್ಷಾಮ ಎದುರಿಸುತ್ತಿರುವ ನಡುವೆ ಶಾಲಾ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ.

Advertisement

ಮೇ 29ರಿಂದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ದಿನ ನಿಗದಿಪಡಿಸಿದೆ. ಮೇ 28ರಂದು ಶಿಕ್ಷಕರು ಶಾಲೆಗೆ ಬಂದು ಸಿದ್ಧತೆ ಮಾಡಿಕೊಳ್ಳಲು ಮೌಖೀಕವಾಗಿ ಸೂಚಿಸಲಾಗಿದೆ. ಮೇ 29ರಂದು ಶಾಲಾ ಪ್ರಾರಂಭೋತ್ಸವ ನಡೆಸಲು ಇಲಾಖೆ ನಿರ್ದೇಶನ ನೀಡಿದೆ.

ಮೇ 31ರವರೆಗೆ ಮನೆ ಮನೆಗಳಿಗೆ ಹೋಗಿ ಶಾಲೆಗೆ ಮಕ್ಕಳನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸಬೇಕು. ಜೂನ್‌ ತಿಂಗಳಲ್ಲಿ ದಾಖಲಾತಿ ಆಂದೋಲನ ನಡೆಸಬೇಕು. ದಾಖಲಾತಿ ಆಂದೋಲನವನ್ನು ಶಾಲಾ ಮತ್ತು ತಾಲೂಕು ಹಂತದಲ್ಲಿ ನಡೆಸಲಾಗುವುದು. ಇದಕ್ಕೆ ದಿನಾಂಕವನ್ನು ನಿಗದಿಪಡಿಸಿಲ್ಲ.

ಮಧ್ಯಾಹ್ನದೂಟ ನಡೆಯುವುದರಿಂದ ನೀರಿನ ಖರ್ಚು ಹೆಚ್ಚಿಗೆ ಇರುತ್ತದೆ. ಅಡುಗೆ ಮಾಡುವುದಲ್ಲದೆ ಪಾತ್ರೆ ತೊಳೆಯುವುದು, ತಟ್ಟೆ ತೊಳೆಯುವುದಕ್ಕೆ ನೀರು ಬೇಕು. ಇದಲ್ಲದೆ ಶೌಚಾಲಯ ನಿರ್ವಹಣೆಗೂ ನೀರು ಅಗತ್ಯ.

ಬಹುತೇಕ ಶಾಲೆಗಳಲ್ಲಿ ಬಾವಿ, ಕೊಳವೆಬಾವಿಗಳಿವೆ. ಆದರೆ ಈಗ ಮುಂಗಾರು ವಿಳಂಬವಾಗುತ್ತಿ ರುವುದರಿಂದ ಬಹುತೇಕ ಬಾವಿಗಳು ಬತ್ತಿ ಹೋಗಿವೆ. ಸ್ವಂತ ಜಲ ಮೂಲಗಳಿರದ ಶಾಲೆಗಳಲ್ಲಿ ಗ್ರಾ.ಪಂ.ಗಳ ನಳ್ಳಿ ನೀರಿನ ಸಂಪರ್ಕವಿದ್ದು ಗ್ರಾ.ಪಂ.ಗಳಲ್ಲಿಯೂ ನೀರಿನ ಕೊರತೆ ಇದೆ. ಹೀಗಾದರೆ ಗ್ರಾ.ಪಂ.ಗಳ ಮೂಲಕ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಬೇಕಾಗಿದೆ. ಗ್ರಾ.ಪಂ.ಗಳಿಗೂ ಜಿಲ್ಲಾಡಳಿತ ಕುಡಿಯುವ ನೀರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದರಿಂದ ಶಾಲೆಗಳಿಗೂ ಗ್ರಾ.ಪಂ.ಗಳು, ನಗರ ಸ್ಥಳೀಯ ಸಂಸ್ಥೆಗಳು ನೀರು ಸರಬರಾಜು ಮಾಡುವುದು ಬಹುತೇಕ ಖಚಿತ.

Advertisement

ಉಡುಪಿ ಜಿಲ್ಲೆಯಲ್ಲಿ ಒಟ್ಟು 1,248 ಹಿ.ಪ್ರಾ. ಮತ್ತು ಪ್ರೌಢಶಾಲೆಗಳಿವೆ. ಇವುಗಳಲ್ಲಿ 699 ಸರಕಾರಿ ಮತ್ತು ಮಿಕ್ಕುಳಿದದ್ದು ಅನುದಾನಿತ ಮತ್ತು ಅನುದಾನಿತ ಶಾಲೆಗಳು.

ಸಮಸ್ಯೆಗಳಿವೆ ಎಂದ ಮಾತ್ರಕ್ಕೆ ಎಲ್ಲ ಶಾಲೆಗಳಿಗೂ ಏಕರೂಪದಲ್ಲಿ ನಿರ್ಣಯ ತಳೆಯಲು ಆಗುವುದಿಲ್ಲ. ಆಯಾ ಶಾಲಾ ಮಟ್ಟದಲ್ಲಿಯೇ ನಿರ್ಣಯ ತಳೆಯಬಹುದು ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಉಡುಪಿ ಜಿಲ್ಲೆಯಲ್ಲಿ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ತರಗತಿಗಳೂ ಸೋಮವಾರ ಆರಂಭಗೊಂಡಿದೆ. ಇದೇ ವೇಳೆ ಪ್ರಥಮ ಪಿಯುಸಿ ಪ್ರವೇಶಾತಿ ಆರಂಭಗೊಂಡಿದೆ. ಬಹುತೇಕ ಕಡೆ ಹಿ.ಪ್ರಾ. ಶಾಲೆ, ಪ್ರೌಢಶಾಲೆ ಸಮೀಪದಲ್ಲಿ ಪ.ಪೂ. ಕಾಲೇಜುಗಳು ಇರುವುದರಿಂದ ಹಿ.ಪ್ರಾ. ಶಾಲೆ, ಪ್ರೌಢಶಾಲೆ ಆರಂಭವಾಗದ ಕಾರಣ ಲಭ್ಯ ನೀರನ್ನು ಪ.ಪೂ. ಕಾಲೇಜುಗಳು ಬಳಸಿಕೊಳ್ಳುತ್ತಿವೆ. ಮೊದಲ ಮೂರ್‍ನಾಲ್ಕು ದಿನ ತರಗತಿ ಆರಂಭದಲ್ಲಿ ನಡೆಸುವ ಬ್ರಿಡ್ಜ್ ಕೋರ್ಸ್‌ ಇರುವುದರಿಂದ ಎಲ್ಲ ತರಗತಿಗಳೂ ಕಡ್ಡಾಯವಾಗಿ ನಡೆಯುತ್ತಿಲ್ಲ. ಹೀಗಾಗಿ ಸ್ವಲ್ಪ ಬೇಗ ವಿದ್ಯಾರ್ಥಿಗಳನ್ನು ಮನೆಗೆ ಬಿಡಲಾಗುತ್ತದೆ.

ಸಮಸ್ಯೆ ನೀಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ
ಶಾಲೆ ಆರಂಭವಾಗುವುದರೊಳಗೆ ಮಳೆ ಬಂದು ನೀರಿನ ಸಮಸ್ಯೆ ನೀಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಒಂದು ವೇಳೆ ಸಮಸ್ಯೆಗಳಿದ್ದರೆ ಬಿಇಒ ಮೂಲಕ ಆಯಾ ಶಾಲಾ ಮಟ್ಟದಲ್ಲಿ ಸೂಕ್ತ ನಿರ್ಧಾರ ತಳೆಯಲು ತಿಳಿಸುತ್ತೇವೆ.
– ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ.

ಬೇಗ ತರಗತಿಗಳನ್ನು ಬಿಡಬಹುದು
ಎಲ್ಲ ಕಡೆ ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಸೋಮವಾರ ಬ್ರಿಡ್ಜ್ ಕೋರ್ಸ್‌ ಆರಂಭವಾಗಿದೆ. ಹಿ.ಪ್ರಾ. ಶಾಲೆ, ಪ್ರೌಢಶಾಲೆ ಇರುವಲ್ಲಿ ಅಲ್ಲಿನ್ನೂ ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಯನ್ನು ನಿಭಾಯಿಸಲಾಗುತ್ತಿದೆ. ತುಂಬ ಗಂಭೀರ ಸಮಸ್ಯೆ ಇರುವಲ್ಲಿ ಅಪರಾಹ್ನ ಸ್ವಲ್ಪ ಬೇಗ ತರಗತಿಗಳನ್ನು ಬಿಡಬಹುದು.
-ಸುಬ್ರಹ್ಮಣ್ಯ ಜೋಷಿ, ಡಿಡಿಪಿಯು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next